ಗಂಗಾವತಿ:''ಮಹಿಳಾ ಕೂಲಿ ಕಾರ್ಮಿಕರ ಮಕ್ಕಳ ಹಾರೈಕೆಗೆ ಎಂದು ಪ್ರತಿ ಗ್ರಾಮ ಪಂಚಾಯಿತಿಯಲ್ಲೊಂದು ಕೂಸಿನ ಮನೆ ಆರಂಭಿಸಬೇಕು ಎಂಬ ರಾಜ್ಯ ಸರ್ಕಾರದ ಯೋಜನೆ ಅವೈಜ್ಞಾನಿಕವಾಗಿದೆ'' ಎಂದು ಗ್ರಾಮ ಪಂಚಾಯಿತಿಯೊಂದು ಸರ್ಕಾರದ ನಿರ್ಣಯದ ವಿರುದ್ಧ ಠರಾವು ಪಾಸು ಮಾಡಿದೆ.
ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಕೆ. ಮಹಾದೇವಿ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯರು, ''ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಅನುಷ್ಠಾನಕ್ಕೆ ಸಾಕಷ್ಟು ಸಮಸ್ಯೆ ಇದೆ. ಹೀಗಾಗಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಬೇಡ. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಠರಾವು ಪಾಸು ಮಾಡಿ ಸರ್ಕಾರಕ್ಕೆ ಸಲ್ಲಿಸೋಣ'' ಎಂಬ ನಿರ್ಣಯ ಬಹುತೇಕ ಸದಸ್ಯರಿಂದ ವ್ಯಕ್ತವಾಯಿತು.
ಕೂಸಿನ ಮನೆ ಯೋಜನೆಗೆ ಯಾಕೆ ವಿರೋಧ?:''ಪಂಚಾಯಿತಿಯ ವ್ಯಾಪ್ತಿ 4 ರಿಂದ 6 ಕಿಲೋ ಮೀಟರ್ ಇರುತ್ತದೆ. ಕಾರ್ಮಿಕ ಮಹಿಳೆ ತನ್ನ ಮಗುವನ್ನು ಕೂಸಿನ ಕೇಂದ್ರದಲ್ಲಿ ಬಿಡಲು ಎರಡರಿಂದ ಮೂರು ಕಿಲೋ ಮೀಟರ್ ಬರಬೇಕು. ಅಲ್ಲಿಂದ ಕೂಲಿಗೆ ಹೋಗಬೇಕು. ಕೆಲಸದ ಮಧ್ಯೆಯೇ ಹಾಲುಣಿಸಲು ಮತ್ತೆ ಕೇಂದ್ರಕ್ಕೆ ಬರಬೇಕು. ಹಾಲುಣಿಸಿದ ಬಳಿಕ ಕೆಲಸ ಮಾಡುವ ಸ್ಥಳಕ್ಕೆ ಹೋಗಬೇಕು. ಹೀಗಾಗಿ ಅತ್ತ ಮಗುವಿನ ಲಾಲನೆ, ಪಾಲನೆ ಇತ್ತ ಚಿಕ್ಕಮಕ್ಕಳನ್ನು ಹೊಂದಿರುವ ಮಹಿಳಾ ಕಾರ್ಮಿಕರ ಮೇಲೆ ಇನ್ನಿಲ್ಲದ ಒತ್ತಡ ನಿರ್ಮಾಣವಾಗುತ್ತದೆ'' ಎಂದು ಸದಸ್ಯ ವೆಂಕಟೇಶ ಬಾಬು ಸಭೆಗೆ ತಿಳಿಸಿದರು.