ಶಿವಮೊಗ್ಗ: ಭಾದ್ರಪದ ಮಾಸದಲ್ಲಿ ಮೊದಲ ದೊಡ್ಡ ಹಬ್ಬ ಗಣೇಶ ಚೌತಿ ಹಬ್ಬ. ಗಣೇಶ ಹಬ್ಬದ ಮುನ್ನಾ ದಿನ ಗೌರಿ ಹಬ್ಬ. ಗೌರಿ ಹಬ್ಬವನ್ನು ಶಿವಮೊಗ್ಗದಲ್ಲಿ ಅತ್ಯಂತ ಸಡಗರ - ಸಂಭ್ರಮದಿಂದ ಆಚರಿಸಲಾಗುತ್ತದೆ. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್, ಬಸವೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗ್ಗೆಯೇ ಶುಭ ಮುಹೂರ್ತದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ಮುತ್ತೈದೆಯರು ಕುಟುಂಬ ಸಮೇತ ಬಂದು ತಾಯಿಗೆ ಬಾಗಿನ ನೀಡಿ ಕುಟುಂಬದ ಸದಸ್ಯರ ಹೆಸರಿನಲ್ಲಿ ಪೂಜೆ ನೆರವೇರಿಸಿದರು. ಮುತ್ತೈದೆ ಭಾಗ್ಯ ಕರುಣಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
ಗೌರಿ ಹಬ್ಬವಾದ ಇಂದು ಎಲ್ಲ ಮುತ್ತೈದೆಯರು ತಮ್ಮ ತವರು ಮನೆಗೆ ಹೋಗಿ ತಾನು ಹುಟ್ಟಿ ಬೆಳೆದ ಮನೆ ಸುಖ ಸಮೃದ್ಧಿಯಿಂದ ಇರಬೇಕು ಎಂದು ಹಾರೈಸಿ ಬರುತ್ತಾರೆ. ಹಾಗೆಯೇ ತವರು ಮನೆಯವರು ಮಗಳಿಗೆ ಬಾಗಿನ ನೀಡಿ ಕಳುಹಿಸುತ್ತಾರೆ.
ತವರು ಮನೆಗೆ ಬಂದ ಗೌರಿಗೆ ವಿಶೇಷ ಭಕ್ತಿ ಸಮರ್ಪಣೆ:ಗೌರಿ ದೇವಿಯು ಶಿವನನ್ನು ಮದುವೆಯಾದ ಮೇಲೆ ತಾಯಿ ಮನೆ ಭೂ ಲೋಕಕ್ಕೆ ಬಂದಾಗ ಭೂಮಿಯು ಹಸಿರಿನಿಂದ ನಳನಳಿಸುತ್ತಿರುತ್ತದೆ. ಇದರಿಂದ ಗೌರಿ ದೇವಿ ಸಂತೋಷದಿಂದ ಇದೇ ರೀತಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಹರಿಸುತ್ತಾಳೆ ಎಂಬ ನಂಬಿಕೆ ಇದೆ. ತವರು ಮನೆಗೆ ಬಂದ ಮಗಳಿಗೆ ಹೇಗೆ ಸತ್ಕರಿಸಿ ಕಳುಹಿಸಿಕೊಡಲಾಗುತ್ತದೆಯೋ ಹಾಗೆಯೇ ಗೌರಮ್ಮನಿಗೂ ಸಹ ಸತ್ಕರಿಸಲಾಗುತ್ತದೆ. ತಾಯಿಯನ್ನು ಮಗ ಗಣೇಶ ಹುಡುಕಿಕೊಂಡು ಬರುತ್ತಾನೆ. ಇದರಿಂದ ಗಣೇಶನ ಹಬ್ಬ ಬಂದಿದೆ ಎಂಬುದು ನಂಬಿಕೆ.