ಉಡುಪಿ/ಬೆಂಗಳೂರು:ಜಿಲ್ಲೆಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಅವರಿಗೆ ನೀಡಲಾಗಿದ್ದ ರಾಜ್ಯಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ತಡೆ ಹಿಡಿದಿದೆ. ಇಲಾಖೆಯ ಈ ಕ್ರಮಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರಾಮಕೃಷ್ಣ ಸೇರಿದಂತೆ ರಾಜ್ಯದ ಪದವಿಪೂರ್ವ ಕಾಲೇಜುಗಳ ಇಬ್ಬರು ಪ್ರಾಂಶುಪಾಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಶಾಲಾ ಶಿಕ್ಷಣ ಇಲಾಖೆ, ಮಂಗಳವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಪ್ರಶಸ್ತಿ ಪಟ್ಟಿ ಪ್ರಕಟವಾದ ನಂತರ, ರಾಮಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಿಜಾಬ್ ವಿವಾದದ ಸಂದರ್ಭದಲ್ಲಿ ರಾಮಕೃಷ್ಣ ಅವರು ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ಹೊರಗೆ ತಡೆದಿದ್ದು ಸುದ್ದಿಯಾಗಿತ್ತು.
ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 20 ಪ್ರಾಥಮಿಕ ಶಾಲಾ ಶಿಕ್ಷಕರು, 11 ಪ್ರೌಢಶಾಲಾ ಶಿಕ್ಷಕರು, 8 ಪಿಯು ಉಪನ್ಯಾಸಕರು ಹಾಗೂ 2 ಪ್ರಾಂಶುಪಾಲರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿತ್ತು. ಆದರೆ, ಇಂದು (ಸೆ. 5) ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ಅವರನ್ನು ಬಿಟ್ಟು ಉಳಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇಲಾಖೆಯ ಈ ನಡೆಗೆ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕೃಷ್ಣರಾಜ ಬಿಜೆಪಿ ಶಾಸಕ ಶ್ರೀವತ್ಸ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಜಿ.ರಾಮಕೃಷ್ಣ ಅವರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಆಯ್ಕೆಯಾಗಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಹಿಂಪಡೆಯುವ ಮೂಲಕ ರಾಜ್ಯದ ಸಮಸ್ತ ಶಿಕ್ಷಕ ವೃಂದಕ್ಕೆ ಅಪಮಾನ ಮಾಡಿದೆ. ಇದು ಖಂಡನೀಯ. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಉಡುಪಿ ಜಿಲ್ಲೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ದಕ್ಷ ಪ್ರಾಮಾಣಿಕ ಶಿಕ್ಷಕರಿಗೆ ಮಾಡಿದ ಅಪಮಾನ. ಆಯ್ಕೆ ಮಾಡಿ, ಬಳಿಕ ರದ್ದು ಮಾಡಿದ ವಿಚಾರದ ಸಂಬಂಧ ರಾಜ್ಯ ಸರ್ಕಾರ ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಯಾರೋ ದೂರು ನೀಡಿದ ಮೇರೆಗೆ ಪ್ರಶಸ್ತಿ ರದ್ದು ಮಾಡಿರುವುದು ಸರಿಯಲ್ಲ. ರಾಜ್ಯ ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.