ಕರ್ನಾಟಕ

karnataka

ETV Bharat / state

ಬೆಂಗಳೂರಿನ ಕೊಳವೆ ಬಾವಿಯಿಂದ ನೀರು ಪೂರೈಸುವ ಟ್ಯಾಂಕರ್​ಗಳು ಸರ್ಕಾರದ ಸುಪರ್ದಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್ - ನೀರಿನ ಸಮಸ್ಯೆ

ಕುಡಿವ ನೀರಿನ ದಂಧೆ ತಡೆಯಲು ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್​ಗಳು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ತಿಳಿಸಿದರು.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​

By ETV Bharat Karnataka Team

Published : Mar 2, 2024, 2:40 PM IST

ಡಿಸಿಎಂ ಡಿ ಕೆ ಶಿವಕುಮಾರ್​

ಬೆಂಗಳೂರು: "ಬೆಂಗಳೂರಿನಲ್ಲಿ ನೀರಿನ ಅಭಾವ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್​ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರದ ಬಳಿ ಮಾತನಾಡಿದ ಅವರು, "ಬೆಂಗಳೂರಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ನಿತ್ಯ ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಪಾಲಿಕೆ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ. ಕುಡಿವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್​ಗಳು ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ" ಎಂದರು.

"ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವ ನೀಗಿಸುತ್ತೇವೆ. ಈ ವಿಚಾರವಾಗಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಇನ್ನು ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ" ಎಂದು ತಿಳಿಸಿದರು.

ಕುಡಿಯುವ ನೀರಿಗೆ ಹಾಹಾಕಾರ: ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಬರಗಾಲ ಎದುರಾಗಿದೆ. ಒಂದೆಡೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಇನ್ನೊಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಮಹದೇವಪುರ, ಕೆ.ಆರ್​.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ವ್ಯಾಪ್ತಿಯ 110 ಹಳ್ಳಿಗಳ ಜನರು ಸರಿಯಾದ ಕುಡಿಯುವ ನೀರಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿ ವಾರ್ಡ್​ಗಳಲ್ಲೂ ನೀರಿನ ಅಭಾವ ಜನರನ್ನು ಹೈರಾಣಾಗಿಸಿದೆ. ವರ್ತೂರು, ಹಗದೂರು ಮುಂತಾದ ವಾರ್ಡ್​ಗಳಲ್ಲೂ ಬೋರ್​ವೆಲ್​ಗಳು ಬತ್ತಿ ಹೋಗಿವೆ. ಇದರಿಂದಾಗಿ ಇಲ್ಲಿನ ಜನ ನಿತ್ಯ ಟ್ಯಾಂಕರ್​ ನೀರಿನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಜನ ತಿಂಗಳಿಗೆ ಟ್ಯಾಂಕರ್​ ನೀರಿಗೆ 4 ರಿಂದ 5 ಸಾವಿರ ರೂಪಾಯಿಗೆ ಕೊಡುವ ಪರಿಸ್ಥಿತಿ ಬಂದಿದೆ. ಹಣ ಕೊಡಲು ತಯಾರಿದ್ದು, ಟ್ಯಾಂಕರ್​ ನೀರು ಬುಕ್​ ಮಾಡಿದರೆ, ಅದು ಮನೆ ಬಾಗಲಿಗೆ ತಲುಪಲು ಒಂದು ವಾರ ಕಾಯಬೇಕು. ಈ ಸಮಸ್ಯೆಯಿಂದಾಗಿ ಜನ ತಮ್ಮ ವಾರ್ಡ್​ಗಳ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದು ಒಂದು ವಿಧಾನಸಭಾ ಕ್ಷೇತ್ರದ ಕಥೆಯಲ್ಲ. ಕೆ.ಆರ್​.ಪುರ, ಯಶವಂತಪುರ, ಲಕ್ಕಸಂದ್ರ, ಆರ್​.ಆರ್​.ನಗರ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲೂ ಕುಡಿವ ನೀರಿಗೆ ಹಾಹಾಕಾರ ಎದ್ದಿದೆ. ಇತರಡೆಗಳಲ್ಲೂ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕರ್​ಗಳಲ್ಲೂ ದಂಧೆ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್​ನವರು, ನೀರಿಗೆ ಮನಬಂದಂತೆ ಬೆಲೆ ನಿಗದಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ದಂಧೆವನ್ನು ಹತ್ತಿಕ್ಕಲು ಸರ್ಕಾರ ಟ್ಯಾಂಕರ್​ಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ:ಬೆಂಗಳೂರಿಗೆ ಜಲಕ್ಷಾಮ; ಹಲವೆಡೆ ಹನಿ ನೀರಿಗೂ ಹಾಹಾಕಾರ

ABOUT THE AUTHOR

...view details