ಬೆಂಗಳೂರು :ಕನ್ನಡ ಮಾಧ್ಯಮ ಹಾಗೂ 'ಕನ್ನಡ' ಒಂದು ಭಾಷೆಯಾಗಿ ಎಸ್‌ಎಸ್‌ಎಲ್‌ಸಿವರೆಗೂ ಅಧ್ಯಯನ ಮಾಡಿದ ಸರ್ಕಾರಿ ನೌಕರರಿಗೆ ನೀಡಬೇಕಾದ ಒಂದು ಅವಧಿಯ ವೇತನ ಹೆಚ್ಚಳ (ಇಂಕ್ರಿಮೆಂಟ್) ನಿರಾಕರಿಸಿದ್ದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಿಂಚಣಿದಾರರನ್ನು ರಾಜ್ಯ ಸರ್ಕಾರ ಸಹಾನುಭೂತಿ ಮತ್ತು ನೋವಿಲ್ಲದಂತೆ ನಡೆಸಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದೆ.
ಅಲ್ಲದೇ, 2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿ ವೇತನ ಹೆಚ್ಚಳ (ಇನ್ಕ್ರಿಮೆಂಟ್) ಮಂಜೂರು ಮಾಡುವಂತೆ ಮತ್ತು ಹೆಚ್ಚಳದ ಬಾಕಿ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕೋರ್ಟ್ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಸೀತಾಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜಿ.ಬಸವರಾಜ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ. ಅಲ್ಲದೆ, ಈ ಆದೇಶ ಜಾರಿಯಲ್ಲಿ ವಿಫಲವಾದಲ್ಲಿ, ವಿಳಂಬವಾದ ಪ್ರತಿ ತಿಂಗಳಿಗೆ ಶೇ.2ರ ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ತಕ್ಷಣಕ್ಕೆ ಸರ್ಕಾರ ಪಾವತಿ ಮಾಡಬೇಕು. ಬಳಿಕ ಇದಕ್ಕೆ ಕಾರಣವಾದ ಅಧಿಕಾರಿಯಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರು 1980ರ ಸೆಪ್ಟೆಂಬರ್ 24ರಿಂದ 2019ರ ಅಕ್ಟೋಬರ್ 31ರವರೆಗೆ ಕಳಂಕರಹಿತ ಸೇವಾ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಸುಮಾರು ಮೂರು ದಶಕಗಳಿಂದ ಹೆಚ್ಚು ಆಕರ್ಷಕ ಸಂಬಳದಲ್ಲಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ಬಡ ಮಹಿಳೆ ಎಂಬ ಅಂಶವನ್ನು ನಾವು ಮರೆಯಲು ಸಾಧ್ಯವಿಲ್ಲ. ಅವರು ಅದನ್ನು ಪ್ರಾಥಮಿಕ ಶಾಲಾ ಶಿಕ್ಷಕಿ ಎಂಬ ಅತ್ಯಂತ ವಿನಮ್ರ ಹುದ್ದೆಯಲ್ಲಿ ಸೇವೆ ಮಾಡಿದ್ದಾರೆ. ಬಹುಶಃ ಅವರು ಸರ್ಕಾರಿ ಶಾಲೆಯಲ್ಲಿ ಶಾಲೆಯ ತಾಯಿಯಾಗಿ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಇಷ್ಟಾದರೂ ಸೇವೆಯಿಂದ ನಿವೃತ್ತರಾಗಿದ್ದು, ಹೆಚ್ಚು ಪಿಂಚಣಿ ಪಡೆಯದಂತಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.