ಹಾವೇರಿ :ಸಂವಹನ ಸಂಪರ್ಕ ಸಾಧನ ಮೊಬೈಲ್ ಇಂದು ಎಲ್ಲರ ಕೈಯಲ್ಲೂ ರಿಂಗಣಿಸುತ್ತಿರುತ್ತದೆ. ಮೊಬೈಲ್ ಇಲ್ಲದೆ ಜೀವನ ಸಾಗಿಸುವುದೇ ಕಷ್ಟ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಸರ್ಕಾರ ಸಿಇಐಆರ್ ಜಾರಿಗೆ;ಹೌದು, ಬಹುತೇಕರು ಒಂದಿಲ್ಲ ಒಂದು ಕಾರಣಕ್ಕೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಸಾವಿರ ರೂಪಾಯಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊಬೈಲ್ ಖರೀದಿ ಮಾಡುತ್ತಾರೆ. ಆದರೆ, ಈ ರೀತಿ ಖರೀದಿ ಮಾಡಿದ ಮೊಬೈಲ್ ಕದಿಯುವ ಖದೀಮರ ಸಂಖ್ಯೆಯೇನು ಕಡಿಮೆಯಿಲ್ಲ. ಇದಕ್ಕಾಗಿ ಸರ್ಕಾರ ಸಿಇಐಆರ್ ಜಾರಿಗೆ ತಂದಿದೆ.
ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಆರಂಭಿಸಿದೆ. ಬೇರೆ ಪ್ರಕರಣಗಳಲ್ಲಿ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದಂತೆ ಮೊಬೈಲ್ ಕಳೆದಾಗ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡುವ ಅವಶ್ಯಕತೆ
ಇಲ್ಲಿಲ್ಲ. ಅದರ ಬದಲು ಮೊಬೈಲ್ ಕಳೆದುಕೊಂಡವರು ಆನ್ಲೈನ್ನಲ್ಲಿ ನೇರವಾಗಿ ದೂರು ಸಲ್ಲಿಸಬಹುದು. ಜೊತೆಗೆ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಸಲ್ಲಿಸಿದರೂ ನಡೆಯುತ್ತೆ.
ಈ ರೀತಿ ಹಾವೇರಿ ಜಿಲ್ಲೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಅಂದರೆ 08-06-2024 ರಿಂದ 22-06-2024 ರವರೆಗೆ ಸುಮಾರು 245 ಕಳ್ಳತನವಾದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಿಇಐಆರ್ ಪ್ರಕರಣಗಳಲ್ಲಿ ದಾಖಲು ಮಾಡಿರುವ ಮೊಬೈಲ್‌ಗಳ ವಿತರಣಾ ಕಾರ್ಯ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ನಡೆಯಿತು.