ಬೆಂಗಳೂರು: ಅತಿ ಹೆಚ್ಚು ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿರುವ ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾದವರ ಹುಡುಕಾಟ ಹಾಗೂ ಇತರೆ ರಕ್ಷಣಾ ಕಾರ್ಯ ಸದ್ಯ ಸ್ಥಗಿತಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ. ಘಟನೆ ಸಂಬಂಧ ರಕ್ಷಣಾ ಕಾರ್ಯಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ವಕೀಲ ಸಿ.ಜಿ.ಮಲೈಯಿಲ್ ಹಾಗೂ ಕೆ.ಎಸ್.ಸುಭಾಷ್ ಎಂಬವರು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದ್ದು, ಇನ್ನೂ ಮೂವರು ಪತ್ತೆಯಾಗಬೇಕಿದೆ. ಆದರೆ, ನದಿಯಲ್ಲಿ ನೀರಿನ ಪ್ರಮಾಣ ಹಾಗೂ ರಭಸ ಹೆಚ್ಚಾಗಿರುವುದರ ಜೊತೆಗೆ ಸ್ಥಳೀಯವಾಗಿ ಪ್ರತಿಕೂಲ ಸಂದರ್ಭಗಳು ಎದುರಾಗಿದ್ದರ ಹಿನ್ನೆಲೆಯಲ್ಲಿ ಆಗಸ್ಟ್ 16ರಿಂದ ರಕ್ಷಣಾ ಕಾರ್ಯಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ರಕ್ಷಣಾ ಕಾರ್ಯ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸರ್ಕಾರ ಸ್ಥಳೀಯ ಈಜುಗಾರ ಈಶ್ವರ್ ಮಲ್ಪೆ ನೆರವು ಪಡೆದುಕೊಳ್ಳುತ್ತಿಲ್ಲ, ಘಟನಾ ಸ್ಥಳದ ಬಳಿ ಬರುವುದಕ್ಕೂ ಆಕ್ಷೇಪಿಸಲಾಗುತ್ತಿದೆ, ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.