ಬೆಂಗಳೂರು:ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5, 8, 9 ಮತ್ತು 11 ತರಗತಿಯ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ದ್ವಿಸದಸ್ಯ ಪೀಠಕ್ಕೆ ಮೆಲ್ಮನವಿ ಸಲ್ಲಿಸಿದೆ.
ಗುರುವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ.ಜೆ.ಶಿವಶಂಕರೇಗೌಡ ಪೀಠದ ಎದುರು ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ್ ಅವರು ಈ ವಿಷಯ ಪ್ರಸ್ತಾಪಿಸಿದರು.
ಅಲ್ಲದೆ, ಮಾರ್ಚ್ 11ರಿಂದ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆ ನಡೆಸಿಕೊಂಡಿದೆ. ಈ ಹಂತದಲ್ಲಿ ಏಕಸದಸ್ಯ ಪೀಠ, ಶಿಕ್ಷಣ ಇಲಾಖೆ ಸುತ್ತೋಲೆ ರದ್ದುಪಡಿಸಿರುವ ಕಾರಣ ಪರೀಕ್ಷೆ ನಡೆಸಲು ಹಲವು ಸಮಸ್ಯೆ ಎದುರಾಗಲಿದೆ. ಆದ್ದರಿಂದ ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು. ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಪರೀಕ್ಷಾ ವೇಳಾಪಟ್ಟಿ ಸಿದ್ಧಗೊಂಡಿದೆ ಎಂದು ಕೋರಿದರು.
ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ''ಈ ಪೀಠ ಇರುವುದಿಲ್ಲ. ಹೀಗಾಗಿ, ಮತ್ತೊಂದು ಪೀಠವನ್ನು ರಚನೆ ಮಾಡಿ ಇಂದೇ ವಿಚಾರಣೆಗೆ ವ್ಯವಸ್ಥೆ ಮಾಡಲಾಗುವುದು'' ಎಂದು ತಿಳಿಸಿದರು.
ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನಿಸಿ, ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯ್ದೆಯಡಿ 2023ರ ಅಕ್ಟೋಬರ್ 6 ಮತ್ತು 9 ರಂದು ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ, ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳಿಗಾಗಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಬುಧವಾರ ಸುತ್ತೋಲೆ ರದ್ದುಪಡಿಸಿ ತೀರ್ಪು ಪ್ರಕಟಿಸಿತ್ತು.
ಹೈಕೋರ್ಟ್‌ನ ಈ ಆದೇಶದಿಂದ ಮಾರ್ಚ್ 13 ರಿಂದ 19 ರವರೆಗೂ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದಂತಾಗಿದೆ. ಅಲ್ಲದೆ ಸೆಕ್ಷನ್ 22ರ ಪ್ರಕಾರ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯ ಮೂಲಕ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡುವುದಕ್ಕಾಗಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಸೆಕ್ಷನ್ 145 (4)ರ ಪ್ರಕಾರ ಯಾವುದೇ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾದಲ್ಲಿ ಶಾಸನ ಸಭೆಯಲ್ಲಿ ಚರ್ಚಿಸಿದ ಬಳಿಕ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಲಾಗಿದೆ. ಆದರೆ, ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಈ ರೀತಿಯ ಯಾವುದೇ ನಿಯಮಗಳಿಗೆ ತಿದ್ದುಪಡಿ ಮಾಡಿಲ್ಲ. ಆದ್ದರಿಂದ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿರುವ ಕ್ರಮ ಶಿಕ್ಷಣ ಕಾಯ್ದೆ ಸೆಕ್ಷನ್ 22ಕ್ಕೆ ತದ್ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿತ್ತು.
ದೊಡ್ಡಮಟ್ಟದ ವಿದ್ಯಾರ್ಥಿಗಳಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆ ತರಬೇಕಾದರೆ ಯಾವುದೇ ಆಕ್ಷೇಪಗಳು ಇಲ್ಲದಂತೆ ಮತ್ತು ಕಡ್ಡಾಯವಾಗಿ ನಿಗದಿಪಡಿಸಿರುವ ಕಾರ್ಯವಿಧಾನದ ಮೂಲಕ ತರಬೇಕು. ಹೀಗಾಗಿ, ಶಿಕ್ಷಣ ಇಲಾಖೆ ಸುತ್ತೋಲೆ ದೋಷಪೂರಿತವಾಗಿದೆ ಎಂದು ಪೀಠ ತಿಳಿಸಿತ್ತು.
ಇದನ್ನೂ ಓದಿ:5,8,9 ಮತ್ತು 11 ತರಗತಿ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್; ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಸಿದ್ಧತೆ