ಕರ್ನಾಟಕ

karnataka

ETV Bharat / state

ರಾಜ್ಯದ ಕೊನೆ ರೈಲು ನಿಲ್ದಾಣಕ್ಕೆ ಮೊದಲ ಬಾರಿ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲು

ಮಂಗಳೂರಿನಿಂದ ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಮೊದಲ ಬಾರಿಗೆ ಗೂಡ್ಸ್​ ರೈಲು ಮೂಲಕ ರಸಗೊಬ್ಬರವನ್ನ ಸಾಗಣೆ ಮಾಡಲಾಯಿತು.

Goods-train
ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲು (ETV Bharat)

By ETV Bharat Karnataka Team

Published : Oct 26, 2024, 8:40 PM IST

ಚಾಮರಾಜನಗರ : ಮಂಗಳೂರಿನಿಂದ ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಪ್ರಥಮ ಬಾರಿಗೆ 10 ಬೋಗಿಗಳಲ್ಲಿ ರಸಗೊಬ್ಬರ ಸಾಗಣೆ ಮಾಡಿದ ಗೂಡ್ಸ್ ರೈಲಿಗೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಸ್ವಾಗತಿಸಿ, ಪೂಜೆ ಸಲ್ಲಿಸುವ ಮೂಲಕ ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ರೈಲ್ವೆ ಸಮಿತಿ ಸದಸ್ಯ ವಿ. ಪ್ರಭಾಕರ್ ಮಾತನಾಡಿ, ''ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಒಳ್ಳೆಯ ಉದ್ದೇಶದಿಂದ ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪಡಿತರ ಮಾತ್ರ ಸಾಗಣೆ ಮಾಡುತ್ತೀರಿ. ರಸಗೊಬ್ಬರ ಸಾಗಣೆ ಏಕೆ ಮಾಡುತ್ತಿಲ್ಲ ಎಂದು ಗಮನ ಸೆಳೆದ ಪರಿಣಾಮದಿಂದ ಇಂದು ರಸಗೊಬ್ಬರ ಸಾಗಣೆ ಆಗಿದೆ. ಇನ್ನು ಮುಂದೆ ನಿರಂತರವಾಗಿ ರಸಗೊಬ್ಬರ ಸಾಗಣೆ ಮಾಡುತ್ತಾರೆ. ಇದಕ್ಕೆ ಲಾರಿ ಮಾಲೀಕರು, ಕಾರ್ಮಿಕರ ಸಹಕಾರ ಅಗತ್ಯವಾಗಿದೆ'' ಎಂದರು.

ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲಿಗೆ ಪೂಜೆ ಸಲ್ಲಿಸಿದ ರಸಗೊಬ್ಬರ ಮಾರಾಟಗಾರರು (ETV Bharat)

ಜಿಲ್ಲೆಯಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬಂದರೆ ಹೆಚ್ಚಿನ ಬೋಗಿಗಳು, ರೈಲು ಕೇಳಬಹುದು. ಚಾಮರಾಜನಗರ ಜಿಲ್ಲೆಯಿಂದ ರೈಲ್ವೆ ಇಲಾಖೆಗೆ ಆದಾಯ ಕಡಿಮೆ ಇದೆ. ನಮ್ಮ ಜಿಲ್ಲೆಗೆ ಹೆಚ್ಚಿನ ಸಾಗಾಣಿಕೆ ತರಿಸಿದರೆ ಆದಾಯ ಬರುತ್ತದೆ. ಅವಾಗ ಇತರೆ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಹಾಗೂ ಮೈಸೂರು ಇನ್ನಿತರ ಕಡೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಏನಾದರೂ ರೈಲ್ವೆ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ, ಆಗ ಅದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮಾರಾಟಗಾರರಿಗೆ ಹೊರೆಯಾಗುತ್ತಿತ್ತು: ರಸಗೊಬ್ಬರ ಮಾರಾಟಗಾರ ಸಂಘದ ಅಧ್ಯಕ್ಷ ಯೋಗರಾಜ್ ಮಾತನಾಡಿ, ''ಇಂದು ಮಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ಗೂಡ್ಸ್ ರೈಲು ಮೂಲಕ ರಸಗೊಬ್ಬರ ತಂದಿರುವುದು ತುಂಬಾ ಖುಷಿಯಾಗಿದೆ. ಇದು ರೈತರು, ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಅನುಕೂಲವಾಗಿದೆ. ಹಿಂದೆ ಮೈಸೂರಿನಿಂದ ಲಾರಿಯಲ್ಲಿ ರಸಗೊಬ್ಬರ ತರಬೇಕಾಗಿತ್ತು. ಆದ್ದರಿಂದ ಸಾಗಣಿಕೆ ವೆಚ್ಚ, ಸಮಯ ವ್ಯಯವಾಗಿ ಮಾರಾಟಗಾರರಿಗೆ ಹೊರೆಯಾಗುತ್ತಿತ್ತು. ರಸಗೊಬ್ಬರ ಕೊರತೆ ಎದುರಾಗುತ್ತಿತ್ತು. ಆದರೆ ಈಗ ರಸಗೊಬ್ಬರ ಕೊರತೆ ಎದುರಾಗುವುದಿಲ್ಲ. ಗೂಡ್ಸ್ ರೈಲ್ವೆಯ ಮುಖಾಂತರ ರಸಗೊಬ್ಬರ ಸಾಗಣೆ ಮಾಡಿದ್ದರಿಂದ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಈ ಮೂಲಕ ಅಭಿನಂದಿಸಲಾಗುವುದು'' ಎಂದು ಹೇಳಿದರು.

ಇದನ್ನೂ ಓದಿ :ದೀಪಾವಳಿ, ಛತ್ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ

ABOUT THE AUTHOR

...view details