ಕೊಪ್ಪಳ:ಗವಿಸಿದ್ದೇಶ್ವರ ಮಠ ವಿಶೇಷ ಚೇತನಯುವಕ - ಯುವತಿಯರಿಗೆ ಮದುವೆ ಮಾಡಿಸುವುದರ ಜೊತೆಗೆ ಕೌಶಲ್ಯ ಕಲಿಸಿ, ಅವರು ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡಿದೆ. ಹೌದು, ಅನ್ನ, ಅರಿವು, ಅಕ್ಷರ ಎಂಬ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಜಾತ್ರೆಯ ನಿಮಿತ್ತ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಂತೆ 2023 ರಲ್ಲಿ 21 ವಿಶೇಷ ಚೇತನ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸುವುದರ ಜೊತೆಗೆ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿತ್ತು.
ವಿಶೇಷ ಚೇತನರಾದ ಮಂಜುಳಾ, "2023ರಲ್ಲಿ ಗವಿಮಠದಲ್ಲಿ ಮದುವೆಯಾಗಿರುವ ದಂಪತಿಗಳು ಈಗ ತಮ್ಮ ಸ್ವಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಪೆಟ್ಟಿ ಅಂಗಡಿ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕ, ಕೆಲವರಿಗೆ ಜೆರಾಕ್ಸ್ ಮಿಷನ್ ಸೇರಿದಂತೆ ವಿವಿಧ ವಸ್ತುಗಳನ್ನು ಸಹ ಒದಗಿಸಲಾಗಿತ್ತು. ಮಠದೊಂದಿಗೆ ಖಾಸಗಿ ಸಂಸ್ಥೆಯಾದ ಸೆಲ್ಕೋ ಕೈ ಜೋಡಿಸಿ ನೆರವು ನೀಡಿದ್ದರಿಂದ ಅಂಗಡಿ ನಡೆಸುತ್ತಾ ನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ. ಇದರಿಂದಾಗಿ ನಮ್ಮ ಜೀವನ ನಡೆಯುತ್ತಿದೆ" ಎಂದು ಹೇಳಿದರು.
"ಖಾಸಗಿ ಸಂಸ್ಥೆಯಾದ ಸೆಲ್ಕೋ ಕಳೆದ ವರ್ಷ 21 ಜನ ವಿಕಲಚೇತನರಿಗೆ ವಿವಿಧ ಸೌಲಭ್ಯ ನೀಡಿದೆ. ಈ ಬಾರಿ 60 ಜನರಿಗೆ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಗವಿಮಠದೊಂದಿಗೆ ಕೈಜೋಡಿಸುತ್ತೇವೆ" ಎಂದು ಸೆಲ್ಕೋ ಕಂಪನಿ ಅಧಿಕಾರಿ ಪ್ರಕಾಶ ಮೇಟಿ ತಿಳಿಸಿದರು.