ಬೆಂಗಳೂರು: ಬೆಲೆ ಏರಿಕೆ ಪ್ರತಿನಿತ್ಯ ಒಂದಲ್ಲೊಂದು ರೀತಿಯಲ್ಲಿ ಸಾಮಾನ್ಯ ಜನರನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಈ ಮಧ್ಯೆ ಅತೀ ಮುಖ್ಯವಾದ ಆಹಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ.
ರಾಜ್ಯದಲ್ಲಿ ಬೆಳ್ಳುಳ್ಳಿಗೆ ಬೆಳ್ಳಿಯ ಬೆಲೆ ಬಂದಂತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಬೆಳ್ಳುಳ್ಳಿ 300ರಿಂದ 350 ರವರೆಗೆ ವಿಲೇವಾರಿಯಾಗುತ್ತಿದೆ. ಅದೇ ಬೆಳ್ಳುಳ್ಳಿ ಅಂಗಡಿ ಹಾಗೂ ಬೀದಿಬದಿಯಲ್ಲಿ 400 ರೂಪಾಯಿಗೆ ಮಾರಾಟವಾಗುತ್ತಿದೆ.
ಹದಿನೈದು ದಿನದ ಹಿಂದೆ 100 ರೂಪಾಯಿಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ದಿಢೀರ್ 350ರಿಂದ 400 ರೂಪಾಯಿಗೆ ಮಾರಾಟವಾಗುತ್ತಿರುವುದು ಜನಸಮಾನ್ಯರಿಗೆ ಹೊರೆಯಾಗಿದೆ. ಸಾಮಾನ್ಯವಾಗಿ ಕೆ.ಜಿಗೆ 10 ರಿಂದ 20 ರೂಪಾಯಿಗೆ ಸಿಗುತ್ತಿದ್ದ ಈರುಳ್ಳಿ ಇದೀಗ ಮಾರುಕಟ್ಟೆಯಲ್ಲಿ 50 ರೂ.ಗೆ ಮಾರಾಟವಾಗುತ್ತಿದೆ. ಬೀದಿಬದಿಯಲ್ಲಿ 55ರಿಂದ 60 ರೂಪಾಯಿ ಇದೆ.
"ರಾಜ್ಯಕ್ಕೆ ಬೆಳ್ಳುಳ್ಳಿ ಆಮದು ಕುಸಿದಿದೆ. ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಇಳುವರಿ ಇಲ್ಲದ ಕಾರಣ ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ. ಮಳೆಗಾಲವಾದ ಕಾರಣ ಬೆಳೆ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರುವ ಸಾಧ್ಯತೆ ಇದೆ" ಎಂದು ಯಶವಂತಪುರದ ಹೋಲ್‌ಸೇಲ್ ವರ್ತಕರಾದ ಬಿ.ರವಿಶಂಕರ್ ಹೇಳಿದರು.
ಇದನ್ನೂ ಓದಿ:ಬೆಳ್ಳುಳ್ಳಿ ಬೆಲೆ ಕೆಜಿಗೆ 500- 550ಕ್ಕೆ ಏರಿಕೆ: ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ