ಗಂಗಾವತಿ (ಕೊಪ್ಪಳ):ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ ಗಾದಿಯನ್ನು ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸಿವೆ. ಮೊದಲ ಬಾರಿಗೆ ಬಿಜೆಪಿ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕೆ ಹಲವು ತಂತ್ರಗಳನ್ನು ಹೆಣೆದಿದೆ. ಶಾಸಕ ಜಿ. ಜನಾರ್ದನರೆಡ್ಡಿ ನೇತೃತ್ವದಲ್ಲಿ ಬಿಜೆಪಿ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದಂತೆ ನಗರಸಭೆಯ ಒಟ್ಟು 28ಕ್ಕೂ ಹೆಚ್ಚು ಸದಸ್ಯರನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಒಟ್ಟು 35 ಸದಸ್ಯರ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 17, ಬಿಜೆಪಿಯಿಂದ 14, ಜೆಡಿಎಸ್ ಪಕ್ಷದಿಂದ ಇಬ್ಬರು ಮತ್ತು ಪಕ್ಷೇತರ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ನಗರಸಭೆಯ ಆಡಳಿತದ ಕೊನೆಯ ಹದಿನೆಂಟು ತಿಂಗಳ ಅಧಿಕಾರಕ್ಕಾಗಿ ಇದೀಗ ಎರಡೂ ಪಕ್ಷಗಳು ಭಾರಿ ಕಸರತ್ತು ನಡೆಸಿವೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ರೆಡ್ಡಿಯ ಜೊತೆ ಬಿಜೆಪಿಯ ಐವರು, ಕಾಂಗ್ರೆಸ್ ಪಕ್ಷ ಆರು ಜನ ಮತ್ತು ಜೆಡಿಎಸ್ ಪಕ್ಷದ ಇಬ್ಬರು ಮತ್ತು ಪಕ್ಷೇತರ ಸದಸ್ಯ ಒಬ್ಬರು ಸೇರಿದಂತೆ ಒಟ್ಟು 14 ಜನ ಸದಸ್ಯರು ಗುರುತಿಸಿಕೊಂಡಿದ್ದರು. ಶಾಸಕ ಜನಾರ್ದರೆಡ್ಡಿ ಬಿಜೆಪಿ ಸೇರಿದ ಬಳಿಕ ಇದೀಗ ಬಿಜೆಪಿಯ 14, ಜೆಡಿಎಸ್, ಪಕ್ಷೇತರ ತಲಾ ಇಬ್ಬರು ಸದಸ್ಯರು ರೆಡ್ಡಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಹತ್ತು ಸದಸ್ಯರು ರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.