ಮಂಗಳೂರು(ದಕ್ಷಿಣ ಕನ್ನಡ): ಆರ್ಎಸ್ಎಸ್ ಜಿಲ್ಲಾ ಕಚೇರಿ ಮಂಗಳೂರಿನ ಸಂಘನಿಕೇತನ ಸೌಹಾರ್ದತೆಯ ಸಂದೇಶ ಸಾರಿದೆ. ಹೌದು, ಮಂಗಳೂರಿನ ಸಂಘನಿಕೇತನ ಆರ್ಎಸ್ಎಸ್ನ ಜಿಲ್ಲಾ ಕಚೇರಿ ಈ ಬಾರಿ 77ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಇಲ್ಲಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆ ಸಂದೇಶ ಸಾರಲು ಹಲವು ವರ್ಷಗಳಿಂದ ಆಗಮಿಸುತ್ತಿದ್ದಾರೆ. ಅದರಂತೆ ಈ ಬಾರಿಯೂ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಕ್ರೈಸ್ತ ಬಾಂಧವರು ಕರ್ನಾಟಕ ಬ್ಯಾಂಕ್ ಎಜಿಎಂ ಜೇನ್ ಮರಿಯಾ ಸಲ್ಡಾನಾ ಅವರ ನೇತೃತ್ವದಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಗಣೇಶನಿಗೆ ಪೂಜೆ ಸಲ್ಲಿಸಿದ ಕ್ರೈಸ್ತರು (ETV Bharat) ಈ ವೇಳೆ, ತೆನೆಹಬ್ಬಕ್ಕೆ ಹಿಂದೂಗಳಿಗೆ ಉಚಿತವಾಗಿ ತೆನೆ ಒದಗಿಸುವ ಹಾಗೂ ಗಣಪತಿ ವಿಸರ್ಜನೆಗೆ ಬೋಟುಗಳನ್ನು ಒದಗಿಸುವ ಸಾಮಾಜಿಕ ಕಾರ್ಯಕರ್ತ ಅರ್ಬರ್ಟ್ ಡಿಸೋಜಾ ಜೆಪ್ಪು ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಉದ್ಯಮಿ ಗ್ರಗರಿ ಡಿಸೋಜಾ, ನವೀನ್ ಕಾರ್ಡೋಜಾ ಮತ್ತಿತರರು ಉಪಸ್ಥಿತರಿದ್ದರು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಪ್ರಸಾದ ಸೇವಿಸಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು (ETV Bharat) ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸಂಸ್ಥಾಪಕ ಫ್ರ್ಯಾಂಕ್ಲಿನ್ ಡಿಸೋಜಾ ಮಾತನಾಡಿ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಸಮಗ್ರತೆ ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಆಗುವ ಎಲ್ಲಾ ಕಹಿ ಘಟನೆಗಳನ್ನು ಮರೆತು ನಾವೆಲ್ಲರೂ ಒಂದು ರಾಷ್ಟ್ರ, ಒಂದು ಕುಟುಂಬ ಎಂಬುದನ್ನು ಮನದಲ್ಲಿಟ್ಟುಕೊಂಡು ಇಲ್ಲಿ ಬಂದಿದ್ದೇವೆ. ನಾವೆಲ್ಲರೂ ಸಹೋದರರು, ಒಂದೇ ತಾಯಿ ಮಕ್ಕಳು ಎಂದು ಇಲ್ಲಿ ಬಂದಿದ್ದೇವೆ ಎಂದರು.
ಗಣೇಶೋತ್ಸವವನ್ನು ರಾಷ್ಟ್ರೀಯ ಭಾವೈಕ್ಯತೆಯಿಂದ ಮಾಡಿದ್ದೇವೆ:ಸಂಘನಿಕೇತನದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಸತೀಶ್ ಪ್ರಭು ಮಾತನಾಡಿ, ನಾವು ಗಣೇಶೋತ್ಸವವನ್ನು ಧಾರ್ಮಿಕ ಕಾರ್ಯಕ್ರಮವಾಗಿ ಮಾಡದೇ ರಾಷ್ಟ್ರೀಯ ಭಾವೈಕ್ಯತೆಯಿಂದ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ನಂಬಿಕೆ ಇದೆ. ಆ ನಂಬಿಕೆಗಳು ದೇಶದ ಪ್ರಗತಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಪೂರಕವಾಗಿರಬೇಕು. ಅವರಲ್ಲಿ ಸಾಮಾಜಿಕ ಬದ್ಧತೆ ಬಂದಾಗ ಈ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಉಡುಪಿಯಲ್ಲಿ ಸಂಭ್ರಮದ ಮೊಂತಿ ಫೆಸ್ಟ್: 'ಹೊಸ ಅಕ್ಕಿ' ಊಟ ಸವಿದ ಕ್ರೈಸ್ತರು - Monti Fest Celebration