ಮೈಸೂರು: ನಿಜರೂಪಿ ಗಣೇಶ, ಗಣೇಶನ ಪ್ರತಿರೂಪವಾದ ದಸರಾ ಗಜಪಡೆಗೆ ಇಂದು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಣೇಶ ಹಬ್ಬವನ್ನು ಆಚರಿಸಲಾಯಿತು. ಧಾರಾಕಾರ ಮಳೆಯ ಮಧ್ಯೆಯೇ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಒಟ್ಟಾಗಿ ಗಜಪಡೆಗೆ ಪೂಜೆ ಸಲ್ಲಿಸಲಾಯಿತು.
ಮೈಸೂರು ಅರಮನೆಯಲ್ಲಿ ಗಣೇಶ ಚತುರ್ಥಿ ಆಚರಣೆ: ಗಣೇಶನ ಪ್ರತಿರೂಪಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ (ETV Bharat) ಮೊದಲು ಗಜಪಡೆಯ ಪಾದ ತೊಳೆದು, ಅರಿಶಿನ, ಕುಂಕುಮ, ಗಂಧ ಹಚ್ಚಿ, ಗಣೇಶನಿಗೆ ಇಷ್ಟವಾದ 21 ಬಗೆಯ ಆಹಾರವನ್ನು ಇಟ್ಟು ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಗಜಪಡೆಗೆ ಸಾಂಪ್ರದಾಯಿಕ ಪೂಜೆ (ETV Bharat) ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ ಮಾತನಾಡಿ, "ಮೈಸೂರು ದಸರಾ 2024 ಅಂಗವಾಗಿ 14 ಆನೆಗಳು ಅರಮನೆಗೆ ಆಗಮಿಸಿವೆ. ಮೊದಲ ಹಂತದಲ್ಲಿ 9 ಆನೆಗಳು, 2ನೇ ಹಂತದಲ್ಲಿ 5 ಆನೆಗಳ ಬಂದಿವೆ. ನಿತ್ಯ ತಾಲೀಮು ನಡೆಯುತ್ತಿದೆ. ಇಂದು ಗಣೇಶ ಚರ್ತುಥಿಯ ಅಂಗವಾಗಿ ಇಡೀ ಜಿಲ್ಲೆಯ ಅಧಿಕಾರಿಗಳು ಸೇರಿಕೊಂಡು ಗಣೇಶ ಪೂಜೆ ಹಬ್ಬವನ್ನು ಇಲ್ಲಿ ಆಚರಿಸಿದೆವು. ಎಲ್ಲ 14 ಆನೆಗಳು ಪೂಜೆಯಲ್ಲಿ ಪಾಲ್ಗೊಂಡಿದ್ದವು. ಅರಣ್ಯ ಇಲಾಖೆಯ ಅಧಿಕಾರಿ ವರ್ಗ ದಸರಾ ಮಹೋತ್ಸವಕ್ಕೆ ಶ್ರಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಕುಟುಂಬ ಹಾಗೂ ನಗರ ಪೋಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಕ್ಕಳ ಜೊತೆ ಭಾಗವಹಿಸಿದ್ದಾರೆ" ಎಂದು ತಿಳಿಸಿದರು.
ಗಜಪಡೆಗೆ ಸಾಂಪ್ರದಾಯಿಕ ಪೂಜೆ (ETV Bharat) "ಪ್ರತಿಯೊಂದು ಆನೆಗಳು ಆರೋಗ್ಯವಾಗಿವೆ. ಆನೆಗಳ ಆರೋಗ್ಯ ವಿಚಾರಿಸಲು ವಿಶೇಷ ತಂಡವಿದೆ. ಮಜೀರ್, ಸಂತೋಷ್, ಡಿಸಿಎಫ್ ಪ್ರಭುಗೌಡ ಅವರು ಇದ್ದು ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಬಾರಿಯ ದಸರಾ ಚೆನ್ನಾಗಿ ನಡೆಯುತ್ತದೆ" ಎಂದು ಭರವಸೆಯ ಮಾತುಗಳನ್ನಾಡಿದರು.
ಅರ್ಜುನನ ಬದಲು ನಿಶಾನೆ ಆನೆ ಯಾವುದು?:"ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಆದರೆ ಈ ವರ್ಷ ಅರ್ಜುನ ಆನೆ ಇಲ್ಲ. ಇಷ್ಟು ವರ್ಷ ಅದೇ ನಿಶಾನೆ ಆನೆಯಾಗಿತ್ತು. "ಈ ಬಾರಿ ನಿಶಾನೆ ಆನೆ ಯಾವುದು ಎಂಬುದನ್ನು ಕೆಲವು ದಿನಗಳಲ್ಲಿ ಒಂದು ವಿಶೇಷ ಕಮಿಟಿ ನಿರ್ಧಾರ ಮಾಡುತ್ತದೆ. ತಾಲೀಮು ಮಾಡುವಾಗ ಆನೆಗಳ ಚಲನವಲನಗಳನ್ನು ವೀಕ್ಷಿಸಿ ಮುಂದಿನ ವಾರದಲ್ಲಿ ತಿಳಿಸಲಾಗುತ್ತದೆ" ಎಂದು ಹೇಳಿದರು.
ಗಜಪಡೆಗೆ ಸಾಂಪ್ರದಾಯಿಕ ಪೂಜೆ (ETV Bharat) ಗಜಪಡೆಗೆ ಪೂಜೆ ಸಲ್ಲಿಸಿದ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, "ಗಣೇಶನ ಪ್ರತಿರೂಪವಾದ ಗಜಪಡೆಗೆ ಪೂಜೆ ಮಾಡಿ, ನಾಡಹಬ್ಬ ಚೆನ್ನಾಗಿ ನಡೆಯಲೆಂದು ಗಣಪತಿಯಲ್ಲಿ ಪ್ರಾರ್ಥನೆ ಮಾಡಲಾಯಿತು." ಎಂದು ತಿಳಿಸಿದರು.
ಇದನ್ನೂ ಓದಿ:ಅರಮನೆ ನಗರಿಯಲ್ಲಿ ದಸರಾ ಗಜಪಡೆಯ ತಾಲೀಮು: ಪೋಟೋ ಝಲಕ್ - Dasara Elephant Training Photos