ಮೈಸೂರು:"ಹಿಂದುಗಳು ಹೆಚ್ಚು ಮಕ್ಕಳನ್ನು ಪಡೆಯಬೇಕು. ಮನೆಗೆ ಒಂದು ಮಗು ಸಾಕೆಂಬುದು ತಪ್ಪು. ಹಾಗೆ ಮಾಡುತ್ತಾ ಹೋದರೆ ಧರ್ಮ ಹೊರಟು ಹೋಗುತ್ತದೆ" ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲಾ ಬ್ರಾಹ್ಮಣ ಮಹಾಸಭಾ ದತ್ತ ಸೇನೆ ಹಾಗೂ ಮೈಸೂರು ನಾಗರೀಕರು ಆಶ್ರಮದ ನಾದಮಂಟಪದಲ್ಲಿ 170ನೇ ವಿಶ್ವಧರ್ಮ ವಿಜಯ ಯಾತ್ರೆ ಪೂರೈಸಿದ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
"ಪ್ರತಿಯೊಬ್ಬರೂ ಎಲ್ಲ ಧರ್ಮವನ್ನೂ ಗೌರವಿಸಬೇಕು. ಸತ್ಯ ಮತ್ತು ದಯೆ ಇರಬೇಕು. ಯಾರೋ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದರೆ, ಅವರು ಮನೆಯೇ ನಮ್ಮದೆಂದಾಗ ಸುಮ್ಮನಿರಬಾರದು. ಇನ್ನೊಬ್ಬರನ್ನು ಒಡೆದು ಬದುಕುವುದನ್ನು ಒಪ್ಪಲಾಗದು. ದತ್ತ ಜನಾಂಗದವರೆಲ್ಲ ಒಂದಾಗಬೇಕು" ಎಂದರು.
"ನಾವು ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಸಮುದ್ರಾಲೋಂಘನವನ್ನಾದರೂ ಮಾಡಿ ಧರ್ಮ ಪ್ರಚಾರ ನಡೆಸಬೇಕು. ನಾವು ಅಮೆರಿಕದಲ್ಲಿ ಎಂಟು ಚರ್ಚ್ ಖರೀದಿಸಿ ಆಶ್ರಮ ಕಟ್ಟಿದ್ದೇವೆ. ವಿದೇಶಿಗರು ಅಲ್ಲಿ ಆಶ್ರಮ ಕಟ್ಟಲು 58 ಕೋಟಿ ರೂ ಕೊಟ್ಟಿದ್ದಾರೆ. ಮನೆ ಕೂಡ ಇಲ್ಲದವರೂ ದೇಣಿಗೆ ನೀಡಿದ್ದಾರೆ. ನಾವು ಉಳಿಸಬೇಕಿರುವುದು ಜನಗಳ ಧರ್ಮವನ್ನು. ಇಲ್ಲವಾದರೆ ನಿಮ್ಮ ಮೊಮ್ಮಕ್ಕಳ ಕಾಲಕ್ಕೆ ಪರಿಣಾಮ ಏನಾಗುತ್ತದೋ ನೋಡಿ. ತೆನಾಲಿಯಲ್ಲಿ ಆಯೋಜಿಸಿದ್ದ ಹನುಮಾನ್ ಚಾಲೀಸಾ ಕಾರ್ಯಕ್ರಮಕ್ಕೆ ಅಲ್ಲಿನ ಜನ ತಾವು ಬೆಳೆದಿದ್ದ ಬೆಳೆಯನ್ನೇ ಕಿತ್ತು ಜಮೀನು ಬಿಟ್ಟುಕೊಟ್ಟರು. ಧರ್ಮಾನುಷ್ಠಾನಕ್ಕೆ ನಾವು ಪ್ರೇರೇಪಿಸಿದರೆ ಜನರಲ್ಲಿ ಎಷ್ಟು ಉತ್ಸಾಹ ಇರುತ್ತದೆ ಎಂಬುದಕ್ಕೆ ಇದು ಸಾಕ್ಷಿ" ಎಂದು ತಿಳಿಸಿದರು.