ಹಾವೇರಿ:ಗದಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಕುಟುಂಬದ ಆಧಾರಸ್ತಂಭಗಳನ್ನೇ ಬಲಿ ಪಡೆದಿದೆ. ಭೀಕರ ಅಪಘಾತದಲ್ಲಿ ಮರಣ ಹೊಂದಿರುವ ಮೃತರ ತಂದೆ-ತಾಯಿಗೆ ಮಗ-ಸೊಸೆ, ಮೊಮ್ಮಕ್ಕಳು ಸಾವನ್ನಪ್ಪಿರುವ ವಿಚಾರವನ್ನು ತಿಳಿಸದೇ ಮರೆಮಾಚಲಾಗಿದೆ. ಈ ವಿಚಾರ ಗೊತ್ತಾದರೆ ಹಿರಿಯ ಜೀವಗಳಿಗೂ ಅಪಾಯವಾಗಬಹುದು ಎಂಬ ದೃಷ್ಟಿಯಿಂದ ಈ ವಿಷಯವನ್ನು ತಿಳಿಸಿಲ್ಲ ಎನ್ನಲಾಗ್ತಿದೆ.
ಹೌದು, ಇಂದು ಬೆಳಗ್ಗೆಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಹಾವೇರಿ ನಗರದ ದಂಪತಿ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45) ಹಾಗೂ ಅವರ ಮಗಳು ಐಶ್ವರ್ಯ (16) ಮತ್ತು ಮಗ ವಿಜಯ (12) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ತಂದೆ-ತಾಯಿಗೆ ವಿಚಾರ ತಿಳಿಸದ ಕುಟಂಬಸ್ಥರು: ಯಜಮಾನ ರುದ್ರಪ್ಪ ಅಂಗಡಿ ಹಾವೇರಿಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೃತ ರುದ್ರಪ್ಪ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಪಘಾತ ಘಟನೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಸ್ನೇಹಿತರು ರುದ್ರಪ್ಪ ಮನೆಗೆ ಆಗಮಿಸುತ್ತಿದ್ದಾರೆ. ಮನೆಯಲ್ಲಿ ರುದ್ರಪ್ಪ ತಂದೆ-ತಾಯಿ ಇದ್ದು, ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅಪಘಾತದ ವಿಷಯ ತಂದೆ-ತಾಯಿಗೆ ಇನ್ನೂ ತಿಳಿಸಿಲ್ಲ.