ಬೆಳಗಾವಿ:ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರು ಅನಧಿಕೃತವಾಗಿ ವಾಸವಿರುವ ವಿಚಾರ ವಿಧಾನಪರಿಷತ್ನಲ್ಲಿ ಗಂಭೀರ ಚರ್ಚೆಯಾಯಿತು.
ಈವರೆಗೆ ಅನಧಿಕೃತವಾಗಿ ಇರುವ ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಬಿಜೆಪಿ ಸದಸ್ಯ ಡಿ.ಎಸ್.ಅರುಣ ಕೇಳಿದ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಉತ್ತರಿಸಿದರು. ಪಾಕಿಸ್ತಾನದ 24, ಬಾಂಗ್ಲಾ ದೇಶದ 159 ಜನರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಶೈಕ್ಷಣಿಕ ಪ್ರವಾಸ ಮತ್ತು ಉದ್ಯೋಗ ಅರಸಿ ಬರುವ ಅಕ್ರಮ ವಲಸಿಗರು ಏಜೆಂಟ್ಗಳ ಮೂಲಕ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆದು ಇಲ್ಲಿಯೇ ನೆಲೆಯೂರಿದ್ದಾರೆ. ಹಾಗಾಗಿ, ಇವರನ್ನು ಪತ್ತೆ ಹಚ್ಚಿ ವಾಪಸ್ ಕಳಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ನಕಲಿ ದಾಖಲೆಗಳ ಮೂಲಕ 115 ಜನ ಅನಧಿಕೃತವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರು ವಾಸವಿದ್ದಾರೆ. ಬೆಂಗಳೂರು ನಗರದಲ್ಲಿ 93 ಜನರು, ಮಂಗಳೂರು ನಗರದಲ್ಲಿ ಓರ್ವ, ಬೆಂಗಳೂರು ಜಿಲ್ಲೆಯಲ್ಲಿ ಇಬ್ಬರು, ಚಿತ್ರದುರ್ಗದಲ್ಲಿ 06, ಹಾಸನದಲ್ಲಿ ಮೂವರು ಹಾಗೂ ಉಡುಪಿಯಲ್ಲಿ 10 ಮಂದಿ ಅಕ್ರಮವಾಗಿ ವಾಸವಿದ್ದರು ಎಂದು ಮಾಹಿತಿ ನೀಡಿದರು.