ಗೃಹ ಸಚಿವ ಜಿ. ಪರಮೇಶ್ವರ್ (ETV Bharat) ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ತೀರ್ಮಾನವನ್ನು ವರಿಷ್ಠರು ಮಾಡುತ್ತಾರೆ ಎಂದಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದರೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡುವುದಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ರಾಜ್ಯದ ಹಿತಾಸಕ್ತಿ ಕಾಪಾಡಲಿ: ಕೇಂದ್ರದ ನೂತನ ಸರ್ಕಾರದಲ್ಲಿ ರಾಜ್ಯದಿಂದ ಐವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆಲ್ಲ ಅಭಿನಂದನೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ನಮಗೆ ಜಿಎಸ್ಟಿ ಬಾಕಿ ಬರಬೇಕಿದೆ. ಹಲವು ನೀರಾವರಿ ಯೋಜನೆಗಳ ಅನುಮತಿ ಬೇಕಿದೆ. ಅನೇಕ ಸವಾಲುಗಳು ಈ ಐವರ ಮುಂದಿದೆ. ಇದನ್ನೆಲ್ಲ ಅದ್ಯತೆ ಮೇಲೆ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಈಗ ಕೇಂದ್ರದಲ್ಲಿ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸ್ವಾಭಾವಿಕವಾಗಿ ಕೇಂದ್ರದ ಸಹಕಾರ ಇದ್ದೇ ಇರುತ್ತದೆ. ಕುಮಾರಸ್ವಾಮಿ ರಾಜ್ಯದ ಹಿತಾಸಕ್ತಿ ಕಾಪಾಡಲಿ. ಈ ಐವರು ಕೇಂದ್ರ ಸಚಿವರು ರಾಜ್ಯದ ಸಮಸ್ಯೆ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ. ಕೇಂದ್ರದ ಮಟ್ಟದಲ್ಲಿ ಪರಿಹರಿಸುವ ವಿಶ್ವಾಸವಿದೆ. ಅದು ವಿಫಲರಾದರೆ ಅವರಿಗೂ, ಅವರ ಪಕ್ಷಕ್ಕೂ ನಷ್ಟ. ಯಾರ್ಯಾರಿಗೆ ಯಾವ ಯಾವ ಖಾತೆ ಕೊಡುತ್ತಾರೆ ಎಂಬುದನ್ನು ನಾವು ಕಾದು ನೋಡುತ್ತೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಆರೋಪ ಮಾಡುತ್ತೇವೆ. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇವೆ ಎಂದರು.
ಕೇಂದ್ರದ ಹೊಸ ಸಂಪುಟದಲ್ಲಿ ದಲಿತ ಮತ್ತು ಹಿಂದುಳಿದ ವರ್ಗದವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅವರಿಗೆ ಆ ಸಮುದಾಯದ ಸಂಸದರು ಬೇಕಾಗಿಲ್ಲ ಎನ್ನಿಸುತ್ತದೆ. ರಾಜ್ಯದಿಂದ ದಲಿತ, ಒಬಿಸಿಯವರು ಆಯ್ಕೆ ಆಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಈ ಎರಡೂ ಸಮುದಾಯಗಳನ್ನು ಬಿಜೆಪಿ ಕಡೆಗಣಿಸಿದೆ ಎಂದು ಕೇಂದ್ರದ ವಿರುದ್ಧ ಪರಮೇಶ್ವರ್ ಆರೋಪಿಸಿದರು.
ಜಮ್ಮು ಕಾಶ್ಮೀರದಲ್ಲಿ ವೈಷ್ಣೋದೇವಿ ಭಕ್ತರ ಮೇಲೆ ಉಗ್ರರ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಪದಗ್ರಹಣ ಕಾರ್ಯಕ್ರಮದ ದಿನದಂದೇ ದಾಳಿ ಆಗಿದೆ. ಈ ದಾಳಿ ತಪ್ಪಿಸಲು ಹೋಗಿ ಬಸ್ ಕಂದಕಕ್ಕೆ ಬಿದ್ದಿದೆ. ಭದ್ರತಾ ಲೋಪ ಆಗಿದೆ. ಯಾವುದೇ ಟೆರರ್ ಅಟ್ಯಾಕ್ ನಡೆದಿಲ್ಲ. ಮಿಲಿಟರಿ ಆಪರೇಷನ್ ಇಲ್ಲ ಎಂದಿದ್ದರು. ಈಗ ಬೇರೆ ರೀತಿ ಆಗಿದೆ. ಇನ್ನಷ್ಟು ರಕ್ಷಣೆ ಕೊಡಬೇಕಿದೆ. ಭದ್ರತಾ ಲೋಪ ಆಗಿರುವುದು ಸತ್ಯ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಮೋದಿ ಪದಗ್ರಹಣ: ವಿಜಯೋತ್ಸವದ ವೇಳೆ ಇಬ್ಬರಿಗೆ ಚೂರಿ ಇರಿತ