ಎಫ್ಎಸ್ಎಲ್ ವರದಿ ಬಗ್ಗೆ ಸಚಿವ ಪರಮೇಶ್ವರ್ ಹೇಳಿಕೆ ಬೆಂಗಳೂರು:"ವಿಧಾನಸೌಧದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಂದಿದೆ. ಇದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಗಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, "ಪಾಕಿಸ್ತಾನದ ಪರ ಮೂವರು ಘೋಷಣೆ ಕೂಗಿದ್ದಾರಾ ಅಥವಾ ಇನ್ನಷ್ಟು ಜನ ಇದ್ದರಾ ಎಂಬುದು ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಈ ಬಗ್ಗೆ ವರದಿ ಬಂದಿದೆ" ಎಂದರು.
ಎಫ್ಎಸ್ಎಲ್ ವರದಿಯನ್ವಯ ಬಂಧನ:"ಮೂವರು ಆರೋಪಿಗಳನ್ನು ಸರ್ಕಾರದ ಎಫ್ಎಸ್ಎಲ್ ವರದಿ ಅನ್ವಯವೇ ಬಂಧಿಸಲಾಗಿದೆ. ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಧಿಕೃತ ಆಧಾರ ಬರುವವರೆಗೆ ಕಾಯಿರಿ ಎಂದು ಹೇಳಿದ್ದೆವು. ಅದರಂತೆ ವರದಿ ಸಿಕ್ಕಿದ್ದು, ಆರೋಪಿಗಳನ್ನು ಇದರ ಆಧಾರದ ಮೇಲೆಯೇ ಬಂಧಿಸಲಾಗಿದೆ" ಎಂದು ಅವರು ತಿಳಿಸಿದರು.
"ಸರ್ಕಾರಕ್ಕೆ ಇದರಿಂದ ಯಾವುದೇ ಮುಜುಗರವಿಲ್ಲ. ನಾವೇನೂ ಅವರಿಗೆ ಕೂಗಲು ತಿಳಿಸಿರಲಿಲ್ಲ. ನಮ್ಮ ಸರ್ಕಾರವೇ ಕೂಗಿದವರನ್ನು ಬಂಧಿಸಿದೆ. ಈ ಕೆಲಸವನ್ನು ಹೊಗಳಬೇಕು. ಮುಲಾಜಿಲ್ಲದೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ವಿಪಕ್ಷಗಳ ಆರೋಪ ಸಹಜ. ಅದನ್ನೆಲ್ಲಾ ಪರಿಗಣಿಸಲು ಸಾಧ್ಯವಿಲ್ಲ" ಎಂದು ಪರಮೇಶ್ವರ್ ಹೇಳಿದರು.
ಮಂಡ್ಯ ಪಾಕ್ ಘೋಷಣೆ ಕೇಸ್:"ಮಂಡ್ಯದಲ್ಲಿ ಈ ಹಿಂದೆ ಪಾಕ್ ಪರವಾಗಿ ಘೋಷಣೆ ಕೂಗಿದ ಆರೋಪವಿದೆ. ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. 2022ರ ನವೆಂಬರ್ನಲ್ಲಿ ಬಿಜೆಪಿಯವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಆ ಪ್ರಕರಣಕ್ಕೂ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಿನ ಮತ್ತು ಇಂದಿನ ಘಟನೆ ಎಲ್ಲವೂ ಒಂದೆ. ಪಾಕ್ ಪರ ಘೋಷಣೆ ಕೂಗಿರುವುದು ತಪ್ಪು" ಎಂದರು.
"ಅಂದಿನ ಬಿಜೆಪಿ ಸರ್ಕಾರ ಕ್ರಮ ಜರುಗಿಸಬೇಕಿತ್ತು. ಆದರೆ, ಅವರು ಈ ಬಗ್ಗೆ ತನಿಖೆ ಮಾಡಿಲ್ಲ. ಅಂದಿನ ಪ್ರಕರಣದ ಬಗ್ಗೆ ಈಗ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಯಾವ ಸ್ಥಳ, ಸಂದರ್ಭದಲ್ಲಿ ದೇಶ ವಿರೋಧಿ ಹೇಳಿಕೆ ಕೂಗಿದ್ದಾರೆ ಎಂಬುದು ಗೊತ್ತಾಗಲಿದೆ" ಎಂದು ಗೃಹ ಸಚಿವರು ಹೇಳಿದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಗ್ಗೆ ಮಾತನಾಡಿ, "ಬಾಂಬ್ ಸ್ಫೋಟವನ್ನು ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ( UAPA) ತನಿಖೆ ನಡೆಸಲಾಗುತ್ತಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೂಡ ತನಿಖೆ ನಡೆಸುತ್ತಿದೆ. ಸಿಸಿಬಿ ಪೊಲೀಸರು ಪ್ರಕರಣವನ್ನು ಅವರಿಗೆ ಹಸ್ತಾಂತರ ಮಾಡಿದ್ದಾರೆ. ನಮಲ್ಲಿರುವ ಮಾಹಿತಿಯನ್ನು ಕೇಂದ್ರ ಏಜೆನ್ಸಿಗೆ ಹಂಚಿಕೊಳ್ಳಲಾಗಿದೆ. ಆರೋಪಿಗಳು ಬಸ್ನಲ್ಲಿ ಬಂದಿದ್ದರು ಎಂದು ಮಾಹಿತಿ ಇದೆ. ಅದರ ಸಿಸಿಟಿವಿ ದೃಶ್ಯಗಳನ್ನು ಕೂಡ ಸಂಗ್ರಹಿಸಲಾಗಿದೆ. ಎಲ್ಲ ಕೋನಗಳಲ್ಲಿ ತನಿಖೆ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ: ಮೂವರ ಬಂಧನ