ಬೆಂಗಳೂರು:ಅಸಲಿ ಜಿಎಸ್ಟಿ ಅಧಿಕಾರಿಗಳು ನಕಲಿ ಶೋಧ ನಡೆಸಿದ ಪ್ರಕರಣದಲ್ಲಿ ಮಹಿಳೆ ಸೇರಿ ನಾಲ್ವರು ಅಧಿಕಾರಿಗಳನ್ನು ಬಂಧಿಸಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 32 ಮೊಬೈಲ್, 50 ಚೆಕ್ ಬುಕ್ ಹಾಗೂ ಎರಡು ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಚೆಕ್ ಬುಕ್ ಹಾಗೂ 32 ಮೊಬೈಲ್ ಫೋನ್ಗಳು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಬೇರೆ ಬೇರೆ ಉದ್ಯಮಿಗಳಿಂದಲೂ ಹಣ ಸುಲಿಗೆ ಮಾಡಿರುವ ಗುಮಾನಿ ವ್ಯಕ್ತವಾಗಿದೆ. ಇಂದು ಬಂಧಿತರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಆರೋಪಿತರ ಅಣತಿಯಂತೆ ದೂರುದಾರ ಕೇಶವ್ ತಕ್, ಸ್ನೇಹಿತ ರೋಷನ್ ಬೇಗ್ನಿಂದ 1.5 ಕೋಟಿ ಹಣ ತರಿಸಿಕೊಂಡಿದ್ದ. ಈ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖವಾಗಿತ್ತು. ಹಣ ಹೊಂದಿಸಿ ಹಣ ನೀಡಿದ್ದ ದೂರುದಾರನ ಸ್ನೇಹಿತನ ಪತ್ತೆಗೂ ಶೋಧ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಬಂಧಿತ ಜಿಎಸ್ಟಿ ಅಧಿಕಾರಿಗಳು (ETV Bharat) ಖಾಸಗಿ ಕಂಪನಿ ಇಟ್ಟುಕೊಂಡು ಹವಾಲ ದಂಧೆಯಲ್ಲಿ ತೊಡಗಿರುವ ಆರೋಪದ ಮೇರೆಗೆ ಉದ್ದೇಶಪೂರ್ವಕವಾಗಿ ನಕಲಿ ದಾಳಿ ನಡೆಸಿದ್ದ ಆರೋಪಿತರಿಗೆ 1.5 ಕೋಟಿ ರೂ.ಹಣ ನೀಡಿ ದೂರುದಾರ ಕೇಶವ್ ಹೊರಬಂದಿದ್ದ ಎನ್ನಲಾಗಿದೆ. ಘಟನೆ ನಡೆದ 8 ದಿನಗಳ ಬಳಿಕ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೆ ಅನುಮತಿ ನೀಡಿರಲಿಲ್ಲ:ಉದ್ಯಮಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಮೊದಲಿಗೆ ಆಭಿಷೇಕ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆಗ ಅಸಲಿ ಜಿಎಸ್ಟಿ ಅಧಿಕಾರಿಯೆಂಬುದು ಮನವರಿಕೆಯಾಗಿತ್ತು. ಬಳಿಕ ನಗರ ಪೊಲೀಸ್ ಆಯುಕ್ತರ ಆದೇಶ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ವಿಚಾರಣೆ ವೇಳೆ ಅಭಿಷೇಕ್ ನೀಡಿದ ಮಾಹಿತಿ ಮೇರೆಗೆ ಉಳಿದ ಮೂವರನ್ನು ಬಂಧಿಸಲಾಯಿತು. ಉದ್ಯಮಿ ಮನೆ ಹಾಗೂ ಕಚೇರಿ ಮೇಲೆ ದಾಳಿಗೆ ಹಿರಿಯ ಜಿಎಸ್ಟಿ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆರೋಪಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಉದ್ಯಮಿಯಿಂದ ₹1.5 ಕೋಟಿ ಸುಲಿಗೆ ಆರೋಪ, ನಾಲ್ವರು ಜಿಎಸ್ಟಿ ಅಧಿಕಾರಿಗಳು ಅರೆಸ್ಟ್ - extortion case