ಕರ್ನಾಟಕ

karnataka

ETV Bharat / state

ಸ್ನೇಹಿತನ ಮನೆಯಲ್ಲಿ ಪಾರ್ಟಿ ಮಾಡಿ ₹35 ಲಕ್ಷದ ಚಿನ್ನಾಭರಣ ಕದ್ದವ ಸೆರೆ - FRIEND ARRESTED FOR STEALING GOLD

ಗೆಳೆಯನ ಮನೆಯಲ್ಲಿ ಕಳ್ಳತನ ಮಾಡಿರುವುದಲ್ಲದೆ, ಸ್ವತಃ ತಾನೇ ಗೆಳೆಯನನ್ನು ಕರೆದುಕೊಂಡು ಹೋಗಿ ಪೊಲೀಸ್​ ಠಾಣೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ಕೊಡಿಸಿದ್ದ ಆರೋಪಿ!​.

The seized gold ornaments and the accused
ವಶಪಡಿಸಿಕೊಂಡಿರುವ ಚಿನ್ನಾಭರಣ ಹಾಗೂ ಆರೋಪಿ (ETV Bharat)

By ETV Bharat Karnataka Team

Published : Dec 13, 2024, 3:30 PM IST

ಬೆಂಗಳೂರು: ಉಂಡು ಹೋದ ಕೊಂಡು ಹೋದ ಎಂಬ ಗಾದೆ ಮಾತಿನಂತೆ ಪಾರ್ಟಿ ಮಾಡಲು ಬಂದ ಗೆಳೆಯನ ಮ‌ನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಸ್ನೇಹಿತನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಭರತ್ ಬಂಧಿತ ಆರೋಪಿ. ಸ್ನೇಹಿತ ಮಣಿ ಮನೆಯಲ್ಲಿ ಕಳ್ಳತನ ಮಾಡಿದ್ದ 35 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಏರೋನಾಟಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿದ್ದ ಭರತ್, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಉತ್ತರಹಳ್ಳಿಯ ಮೂಕಾಂಬಿಕಾ ನಗರದ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ಈತನೂ ಸೇರಿದಂತೆ ಇನ್ನಿಬ್ಬರನ್ನು ಮಣಿ ಪಾರ್ಟಿ ಮಾಡಲು ಕರೆದಿದ್ದಾನೆ. ಸ್ನೇಹಿತನ ಆಹ್ವಾನದಂತೆ ಭರತ್ ಡಿ.4ರಂದು ಮನೆಗೆ ಬಂದು ಒಟ್ಟಿಗೆ ಪಾರ್ಟಿ ಮಾಡಿದ್ದ. ರಾತ್ರಿ ಆತನ ಮ‌ನೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. ಮಣಿಗೆ ಮದುವೆ ನಿಗದಿಯಾಗಿದ್ದು, ಇದಕ್ಕಾಗಿ ಮನೆಯವರು 453 ಗ್ರಾಂ ಚಿನ್ನಾಭರಣ ಖರೀದಿಸಿಟ್ಟಿದ್ದರು. ಇದನ್ನರಿತ ಆರೋಪಿ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿನ್ನಾಭರಣ ಕದ್ದು ಸ್ನೇಹಿತನ ಜೊತೆಯಲ್ಲೇ ಸಿನಿಮಾ ನೋಡಿದ್ದ:ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಭರತ್, ತನ್ನ ಮೇಲೆ ಅನುಮಾನ ಬರದಂತೆ ರಾತ್ರಿ ಅಲ್ಲೇ ಉಳಿದುಕೊಂಡಿದ್ದ. ಬೆಳಗ್ಗೆ ಮಣಿ ಜೊತೆ ಪುಷ್ಪ ಸಿನಿಮಾ ನೋಡಿದ್ದ. ಮಾರನೇ ದಿನ ಮಣಿ ಮನೆಯವರು ಬಂದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಸ್ನೇಹಿತ ಭರತ್​ಗೆ ಮಣಿ ತಿಳಿಸಿದ್ದ. ಖುದ್ದು ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ಮಣಿಯಿಂದ ದೂರು ಕೊಡಿಸಿದ್ದ. ಪ್ರಕರಣ ದಾಖಲಿಸಿಕೊಂಡ ಇನ್​ಸ್ಪೆಕ್ಟರ್ ಎಂ.ಎಸ್.ರಾಜು ಅವರ ತಂಡ ಪಾರ್ಟಿ ಮಾಡಲು ಮನೆಗೆ ಬಂದಿದ್ದ ಮೂವರು ಸ್ನೇಹಿತರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಭರತ್ ದುರಾಸೆಗೆ ಒಳಪಟ್ಟು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮೆಡಿಕಲ್ ವಿದ್ಯಾರ್ಥಿನಿಗೆ ಮನೆ ಮಾಲೀಕನಿಂದ ಲೈಂಗಿಕ ಕಿರುಕುಳ ಆರೋಪ: ವ್ಯಕ್ತಿ ಬಂಧನ

ABOUT THE AUTHOR

...view details