ಮೈಸೂರು:ಸ್ವಚ್ಛ ನಗರಿ ಖ್ಯಾತಿಯ ಮೈಸೂರಿನಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ನಿರ್ವಹಣೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಜಿಲ್ಲಾಡಳಿತ ಹೊಸ ದಾರಿ ಕಂಡುಕೊಂಡಿದೆ. ಜನರು ತ್ಯಾಜ್ಯ, ಪ್ಲಾಸ್ಟಿಕ್ ಕೊಟ್ಟರೆ ಉಚಿತವಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ನೀಡುವ ವಿನೂತನ ಪ್ರಯೋಗ ಆರಂಭಿಸಿದೆ. ನಗರ ಸ್ವಚ್ಛತೆಯ ಜೊತೆಗೆ ಹಸಿದವನಿಗೂ ಊಟ ನೀಡುವ ಈ ಯೋಜನೆ ವಿಶೇಷವಾಗಿದೆ.
ಮೈಸೂರು ಮಹಾನಗರ ವ್ಯಾಪ್ತಿಯಲ್ಲಿ 11 ಹಾಗೂ ಮೈಸೂರು ಜಿಲ್ಲಾ ವ್ಯಾಪ್ತಿ ಅಂದರೆ ತಾಲೂಕು ಕೇಂದ್ರಗಳ 5 ಸೇರಿ ಒಟ್ಟಾರೆ 16 ಇಂದಿರಾ ಕ್ಯಾಂಟೀನ್ಗಳಿವೆ. ಈ ಕ್ಯಾಂಟೀನ್ಗಳಲ್ಲಿ ಪ್ರತಿದಿನ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ನೀಡಲಾಗುತ್ತಿದೆ. ಹಸಿವಿನಿಂದ ಯಾರೂ ಬಳಲಬಾರದು ಎಂಬುದು ಸರ್ಕಾರದ ಉದ್ದೇಶ. ಇದರಿಂದ ಕಾಲೇಜು ವಿದ್ಯಾರ್ಥಿಗಳು, ರಸ್ತೆ ಬದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಕೆಲಸಕ್ಕೆ ಬರುವ ಜನರಿಗೆ ಊಟ ದೊರೆಯುತ್ತಿದೆ.