ರಾಮನಗರ:ಚನ್ನಪಟ್ಟಣದ ದೊಡ್ಡಮಳೂರು ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಗಣೇಶ ಮೂರ್ತಿ ವಿತರಣಾ ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ, ಯುವಕರಿಗೆ ಗೌರಿ ಗಣೇಶ ಮೂರ್ತಿಯನ್ನು ವಿತರಣೆ ಮಾಡಿದರು.
ಉಚಿತ ಗಣೇಶ ಮೂರ್ತಿ ವಿತರಣೆ: ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಿಖಿಲ್ ಕುಮಾರಸ್ವಾಮಿ (ETV Bharat) ನಂತರ ಮಾತನಾಡಿದ ಅವರು, "ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ರಾಜ್ಯದ ರೈತಾಪಿ ವರ್ಗಕ್ಕೆ ಮಳೆ ಬೆಳೆ ಆಗಲಿ, ಬೆಳೆದಿರುವ ಎಲ್ಲ ಬೆಳೆಗಳಿಗೆ ನಿಗದಿತ ಬೆಲೆ ಸಿಗಲಿ. ಜೊತೆಗೆ ಇಡೀ ರಾಜ್ಯದ ಜನತೆಗೆ ಆರೋಗ್ಯ, ಆಯಸ್ಸು, ನೆಮ್ಮದಿ ಕಲ್ಪಿಸಲಿ" ಎಂದು ಹಾರೈಸಿದರು.
"ಚನ್ನಪಟ್ಟಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷರು ಜಯಮುತ್ತು ಅವರು ಉಚಿತ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ನಾನೂ ಭಾಗವಹಿಸಿ ಯುವಕರಿಗೆ ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದೇನೆ" ಎಂದರು.
ಗೆಲ್ಲಲು ಕಾರ್ಯಕರ್ತರು ಸಜ್ಜಾಗಬೇಕು:"ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ಕ್ಷೇತ್ರದ ಹಲವೆಡೆ ಸಭೆಗಳನ್ನು ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಎಲ್ಲರ ಅಭಿಪ್ರಾಯಗಳನ್ನು ವರಿಷ್ಠರಿಗೆ ತಲುಪಿಸುವ ಕೆಲಸ ಆಗ್ತಿದೆ. ಅಂತಿಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿದೆ" ಎಂದರು.
ಆರೋಗ್ಯಕರ ಚುನಾವಣೆ ನಡೆಯಬೇಕು:ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರದ ಕುರಿತು ಮಾತನಾಡಿದ ಅವರು, "ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಬಿಜೆಪಿಯ ಹಿರಿಯ ವರಿಷ್ಠರ ಜೊತೆಗೂ ಕೂಡ ಚರ್ಚೆ ಮಾಡಲಾಗಿದೆ. ಕ್ಷೇತ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಅಂತಿಮವಾಗಿ NDA ಅಭ್ಯರ್ಥಿ ಪರವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೇವೆ" ಎಂದರು.
ಕಾಂಗ್ರೆಸ್ ಸೋಲಿಸಲು ಸೂಕ್ತ ಅಭ್ಯರ್ಥಿ:ಒಟ್ಟಿನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ:ಶಿವಮೊಗ್ಗ: ಬಾಗಿನ ನೀಡಿ ಸಂಭ್ರಮದಿಂದ ಗೌರಿ ಗಣೇಶ ಹಬ್ಬ ಆಚರಿಸಿದ ಮುತ್ತೈದೆಯರು - Gowri Ganesha festival