ಬೆಂಗಳೂರು: ಎಟಿಎಂ ಕಾರ್ಡ್ ಪಿನ್ ನಂಬರ್ ಬದಲಾಯಿಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 75 ಸಾವಿರ ರೂಪಾಯಿ ಹಣ ಎಗರಿಸಿದ್ದ ಬಿಹಾರ ಮೂಲದ ಇಬ್ಬರು ವಂಚಕರನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚುನಿಲಾಲ್ ಕುಮಾರ್ ಹಾಗೂ ವಿವೇಕ್ ಕುಮಾರ್ ಬಂಧಿತರು. ಇವರಿಂದ ನಿಷ್ಕ್ರಿಯಗೊಂಡಿರುವ ವಿವಿಧ ಬ್ಯಾಂಕ್ಗಳ 37 ಎಟಿಎಂ ಕಾರ್ಡ್ಗಳು ಹಾಗೂ 7,500 ಸಾವಿರ ನಗದು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಇವರು, ಬಳಿಕ ವಂಚನೆಗೆ ಇಳಿದಿದ್ದರು. ಇದಕ್ಕಾಗಿ ಎಟಿಎಂ ಸೆಂಟರ್ಗಳಿಗೆ ಬರುವ ಮುಗ್ಧರು, ವಯೋವೃದ್ಧರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು.
ಚಿಕ್ಕಕಲ್ಲಸಂದ್ರ ನಿವಾಸಿಯಾಗಿರುವ ಸಂಜಯ್ ಸಿಂಗ್ ಎಂಬವರು ಜುಲೈ 15ರಂದು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ತೆರಳಿ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಬಳಿಕ ಎಟಿಎಂ ಪಿನ್ ನಂಬರ್ ಮರೆತು ಹೋಗಿದ್ದರಿಂದ ಹೊಸ ಪಿನ್ ನಂಬರ್ ಸೆಟ್ ಮಾಡಲು ಬ್ಯಾಂಕ್ ಪಕ್ಕದಲ್ಲಿದ್ದ ಎಟಿಎಂಗೆ ತೆರಳಿದ್ದಾರೆ. ತಮಗೆ ಪಿನ್ ನಂಬರ್ ಸೆಟ್ ಮಾಡಲು ಆಗದಿದ್ದಾಗ ಇದೇ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ವಂಚಕನನ್ನು ಕರೆದು ಪಿನ್ ನಂಬರ್ ಸೆಟ್ ಮಾಡಿಕೊಡುವಂತೆ ಸಹಾಯ ಕೇಳಿದ್ದಾರೆ.