ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾದ ನಾಲ್ಕನೇ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ಮತ್ತೊಂದೆಡೆ, ಇದೇ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಹೆಸರೂ ಸಹ ಥಳುಕು ಹಾಕಿಕೊಂಡಿದೆ. ಸದ್ಯ ಸಿಐಡಿಯ ಸೈಬರ್ ಕ್ರೈಂ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ಆರೋಪವೇನು?: ಮಗನನ್ನು ಶಾಲೆಗೆ ಸೇರಿಸುವ ವಿಚಾರಕ್ಕೆ ಭೇಟಿಯಾಗಿದ್ದ ಮಹಿಳೆಯ ಫೋನ್ ನಂಬರ್ ಪಡೆದಿದ್ದ ಪ್ರಜ್ವಲ್ ರೇವಣ್ಣ, ನಂತರದ ದಿನಗಳಲ್ಲಿ ವಿವಿಧ ನಂಬರುಗಳಿಂದ ವಿಡಿಯೋ ಕರೆ ಮಾಡಿದ್ದರಂತೆ. ಕರೆಯಲ್ಲಿ ವಿವಸ್ತ್ರವಾಗುವಂತೆ ಮಹಿಳೆಗೆ ಒತ್ತಾಯಿಸಿ, ವಿವಸ್ತ್ರಳಾದಾಗ ಆಕೆಯ ಮುಂದೆಯೇ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲದೇ ಸಂತ್ರಸ್ತ ಮಹಿಳೆ ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೋ ಕರೆಗಳ ಸ್ಕ್ರೀನ್ ಶಾಟ್ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಇದಾದ ಬಳಿಕ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಕರೆಯ ಫೋಟೋ ವೈರಲ್ ಆಗಿರುವ ವಿಚಾರ ಸಂತ್ರಸ್ತೆಯ ಗಮನಕ್ಕೆ ಬಂದಿದೆ. ಈ ಕುರಿತು ಪ್ರಜ್ವಲ್ ರೇವಣ್ಣರನ್ನು ಸಂಪರ್ಕಿಸಿದಾಗ, ಅದೆಲ್ಲವೂ ತಮ್ಮ ವಿರುದ್ಧದ ಷಡ್ಯಂತ್ರ, ಸ್ಟೇ ತಂದಿದ್ದೇನೆ. ಏನೂ ಆಗುವುದಿಲ್ಲ ಎಂದಿದ್ದಾರೆ. ಎರಡನೇ ಬಾರಿ ಫೋಟೋಗಳು ವೈರಲ್ ಆದಾಗ ದೂರು ನೀಡಿರುವ ಸಂತ್ರಸ್ತ ಮಹಿಳೆಯು ಕಿರಣ್, ಶರತ್ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಜನರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಪ್ರಜ್ವಲ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ - Prajwal Revanna