ಚಿಕ್ಕೋಡಿ(ಬೆಳಗಾವಿ):ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾದ ಪರಿಣಾಮ ಟೇಲರ್ ಅಡಿ ಸಿಲುಕಿ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಇಂದಿರಾ ಕಾಲೋನಿ ಸಮೀಪ ಸಂಭವಿಸಿದೆ. ಮಾಲಾಬಾಯಿ ರವಸಾಬ್ ಐನಾಪುರೆ (61), ಚಂಪಾ ಲಕ್ಕಪ್ಪ ತಳಕಟ್ಟಿ (50), ಭಾರತಿ ವಡ್ರಾಳೆ (40) ಮೃತರು. ಶೇಕೂ ನರಸಾಯಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಹಾರಾಷ್ಟ್ರದ ಮೀರಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಲ್ವರು ಮಹಿಳೆಯರು ಕೃಷಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಶೇಡಬಾಳ ಗ್ರಾಮದ ಸಮೀಪ ಜಮಖಂಡಿ ಮೀರಜ್ ರಸ್ತೆಯಲ್ಲಿ ಬರುವಾಗ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾಗಿ ಇವರ ಮೇಲೆ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾರು - ಬೈಕ್ ನಡುವೆ ಅಪಘಾತ, ಸ್ಥಳದಲ್ಲೇ ಇಬ್ಬರು ದುರ್ಮರಣ: ಮತ್ತೊಂದೆಡೆ, ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ಗರ್ಲಗುಜಿ ರಸ್ತೆಯಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ಬೇಕವಾಡ ಗ್ರಾಮದ ರಾಮಲಿಂಗ (ಅಪ್ಪಿ) ಪಾಂಡುರಂಗ ಮುತಗೇಕರ (20) ಮತ್ತು ಹನುಮಂತ ಮಹಾಬಲೇಶ್ವರ ಪಾಟೀಲ್ (20) ಮೃತರು. ಎಂದಿನಂತೆ ಬೈಕ್ನಲ್ಲಿ ನಂದಿಹಳ್ಳಿಯ ಖಾಸಗಿ ಸೈನಿಕ ತರಬೇತಿ ಕೇಂದ್ರಕ್ಕೆ ತರಬೇತಿ ಪಡೆಯಲು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಖಾನಾಪೂರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.