ದಾವಣಗೆರೆ:ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನ ಮಹಾರಾಷ್ಟ್ರಕ್ಕೆ ಕರೆದೊಯ್ದು ಮಾರಾಟ ಮಾಡಿದ್ದ ನಾಲ್ವರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಪಟ್ಟಣದ ನಿವಾಸಿಗಳಾದ ಮಲ್ಲಿಕಾರ್ಜುನ್, ಲೋಕೇಶ್ ನಾಯ್ಕ್, ಲಿಲ್ಲಿ, ರೂಪಾ ಬಂಧಿತ ಆರೋಪಿಗಳು. ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಹೊನ್ನಾಳಿ ಪೊಲೀಸರು ಮಹಿಳೆಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?:ಪತಿ ನಿಧನದಿಂದ ಸಂಕಷ್ಟದಲ್ಲಿ ಮಹಿಳೆಗೆ ಬಂಧಿತ ಆರೋಪಿಗಳು ಕಲ್ಯಾಣ ಮಂಟಪದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಶಿವಮೊಗ್ಗಕ್ಕೆ ಕರೆದೊಯ್ದಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ್ದ ಮಹಿಳೆ, ಮತ್ತೆ ಮೇ.13 ರಂದು ಕೆಲಸಕ್ಕೆ ಹೋಗಿ ಮನೆಗೆ ವಾಪಸ್ ಆಗಿರಲಿಲ್ಲ.
ಮಹಿಳೆ ಸಹೋದರನಿಂದ ದೂರು:"ಆರೋಪಿಗಳು ನನ್ನ ಅಕ್ಕನಿಗೆ ಮಹಾರಾಷ್ಟ್ರದ ಸೊಲ್ಲಾಪುರದ ಮನೆಯೊಂದರಲ್ಲಿ ಕೆಲಸವಿದೆ, ಅಲ್ಲಿ ನೀನು ಚೆನ್ನಾಗಿ ಇರುತ್ತೀಯಾ ಎಂದು ನಂಬಿಸಿ ಕರೆದುಕೊಂಡು ಹೋಗಿದ್ದರು. ನಂತರ ನನ್ನ ಅಕ್ಕ ನನ್ನನ್ನು ಒಂದು ಲಕ್ಷಕ್ಕೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು ಒಂದು ಲಕ್ಷ ರೂಪಾಯಿ ಕೊಟ್ಟರೇ ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ನನ್ನ ತಂಗಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಇದಲ್ಲದೇ ಆರೋಪಿಗಳು 1 ಲಕ್ಷ ಕೊಟ್ಟರೆ ನಿನ್ನ ಅಕ್ಕನನ್ನು ಬಿಡುವುದಾಗಿ ಬೇಡಿಕೆ ಇಡುತ್ತಿದ್ದಾರೆ " ಎಂದು ಆರೋಪಿಸಿ ಮಹಿಳೆಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಹೊನ್ನಾಳಿ ಸಿಪಿಐ ಮುದ್ದುರಾಜ್ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ, "ಕೆಲಸ ಕೊಡಿಸುವುದಾಗಿ ನಂಬಿಸಿ ಹೊನ್ನಾಳಿ ತಾಲೂಕಿನ ಮಹಿಳೆಯೊಬ್ಬರನ್ನು ನಾಲ್ವರು ಆರೋಪಿಗಳು ಇದೇ ತಿಂಗಳ 13 ರಂದು ಕರೆದುಕೊಂಡು ಹೋಗಿ ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದರು. ಜೊತೆಗೆ ಮದುವೆಯಾಗು ಎಂದು ಒತ್ತಾಯ ಕೂಡ ಮಾಡಿದ್ದರು. ಮಹಿಳೆ ತನ್ನ ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದ ಪರಿಣಾಮ, ಆಕೆಯ ಸಹೋದರ ಠಾಣೆಗೆ ಬಂದು ದೂರು ದಾಖಲು ಮಾಡಿದ್ದರು. ತಕ್ಷಣ ಎಫ್ಐಆರ್ ದಾಖಲು ಮಾಡಿಕೊಂಡು ಮಹಿಳೆಯನ್ನು ರಕ್ಷಿಸಿ ನಿನ್ನೆ ಹೊನ್ನಾಳಿಗೆ ಕರೆತಂದಿದ್ದೇವೆ. ಈ ಪ್ರಕರಣ ಸಂಬಂಧ ಭದ್ರಾವತಿ ಮೂಲದ ಮಲ್ಲಿಕಾರ್ಜುನ್, ಲೋಕೇಶ್ ನಾಯ್ಕ್, ಲಿಲ್ಲಿ, ರೂಪಾ ಎಂಬವರನ್ನು ಬಂಧಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ! - family missing