ಬೆಂಗಳೂರು:ಬೇಲಿಯೇ ಎದ್ದು ಹೊಲ ಮೇಯ್ದಂತ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.ಅಧಿಕಾರ ಪ್ರಭಾವ ಬಳಸಿ ಉದ್ಯಮಿಯೊಬ್ಬರ ಕಂಪನಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಅಕ್ರಮವಾಗಿ 1.5 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಡಿ ಓರ್ವ ಮಹಿಳೆ ಸೇರಿ ನಾಲ್ವರು ಜಿಎಸ್ಟಿ ಅಧಿಕಾರಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೀವನ್ ಭೀಮಾನಗರದ ಜಿ.ಎಂ. ಪಾಳ್ಯದಲ್ಲಿ ನೆಲೆಸಿರುವ ಉದ್ಯಮಿ ಕೇಶವ್ ತಕ್ ನೀಡಿದ ದೂರಿನ ಮೇರೆಗೆ ಬೆಂಗಳೂರು ಜಿಎಸ್ಟಿ ವಿಭಾಗದಲ್ಲಿ ಗುಪ್ತಚರ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್, ಮನೋಜ್, ನಾಗೇಶ್ ಬಾಬು ಹಾಗೂ ಸೋನಾಲಿ ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ.
ದೂರಿನಲ್ಲೇನಿದೆ?: ಜೀವನ್ ಭೀಮಾನಗರದಲ್ಲಿ ಮೆಕ್ಸೊ ಸಲ್ಯೂಷನ್ ಪ್ರೈವೇಟ್ ಕಂಪನಿ ನಡೆಸುತ್ತಿದ್ದ ಕೇಶವ್ ತಕ್ ಮನೆಗೆ ಕಳೆದ ಆಗಸ್ಟ್ 31ರಂದು ಆರೋಪಿಗಳು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಜಿಎಸ್ಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಬಂದಿದ್ದಾರೆ. ಏಕಾಏಕಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಪಡಿಸಿಕೊಂಡು ಅಕ್ರಮವಾಗಿ ಕಂಪನಿ ನಡೆಸುತ್ತಿದ್ದೀರಾ ಎಂದು ಆರೋಪಿಸಿ ಕೇಶವ್ ಮನೆಯಲ್ಲಿದ್ದ ಪವನ್, ಮುಖೇಶ್, ರಾಕೇಶ್ ಅವರನ್ನು ಬಲವಂತವಾಗಿ ಎಳೆದುಕೊಂಡು ಎರಡು ಕಾರಿನಲ್ಲಿ ಕೂರಿಸಿದ್ದರು.