ಕೋಲಾರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಮಕ್ಕಳು ಚೇತರಿಸಿಕೊಂಡಿದ್ದಾರೆ.
ದಾಸರಹೊಸಹಳ್ಳಿಯ ಅಂಗನವಾಡಿಯ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದಿರುವುದರಿಂದ ಅಂಗನವಾಡಿಯಲ್ಲಿದ್ದ ಏಳು ಮಕ್ಕಳಲ್ಲಿ ಲಿಖಿತ, ಪರಿಣಿತ, ಸಾನ್ವಿ, ಚರಿತಾಗೆ ಗಾಯಗಳಾಗಿದೆ.
ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿತ (ETV Bharat) ದಾಸರಹೊಸಹಳ್ಳಿಯ ಬಾಲಸ್ನೇಹಿ ಅಂಗನವಾಡಿ ಕೇಂದ್ರ ಶಿಥಿಲಗೊಂಡಿತ್ತು. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಹಲವು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಯವರಿಗೆ ಅಂಗನವಾಡಿ ಕೇಂದ್ರವನ್ನ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಆದರೆ, ಇದೀಗ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರಿಂಗ್ ಬಿದ್ದು ಅಪಾಯ ತಂದೊಡ್ಡಿದೆ.
ಇವತ್ತು ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಕೇಂದ್ರದ ಬೀಗ ತೆಗೆದು ಶಾಲೆಯನ್ನ ಪ್ರಾರಂಭ ಮಾಡಿದ್ದಾರೆ. ಕೇಂದ್ರಕ್ಕೆ ಏಳು ಪುಟ್ಟ ಮಕ್ಕಳು ಬಂದಿದ್ದರು. ಆಟ, ಪಾಠ ಮಾಡುತ್ತಿದ್ದಾಗ ದಿಢೀರ್ ಅಂತಾ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಬಿದ್ದಿದೆ. ಆಗ ಕೇಂದ್ರದಲ್ಲಿದ್ದ ಏಳು ಮಕ್ಕಳ ಪೈಕಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಂಗನವಾಡಿ ಕೇಂದ್ರದ ಅವಘಡದಿಂದ ನಾಲ್ವರು ಮಕ್ಕಳಲ್ಲಿ ಇಬ್ಬರಿಗೆ ಮೂಳೆಯಲ್ಲಿ ಬಿರುಕು ಬಿಟ್ಟಿದ್ದು, ಸರ್ಜರಿ ಮಾಡಲಾಗಿದೆ. ಇನ್ನುಳಿದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಗೆ ಆಗಮಿಸಿದ ಸ್ಥಳೀಯ ಶಾಸಕ ಎಸ್. ಎನ್ ನಾರಾಯಣಸ್ವಾಮಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ನವೀನ್ ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಿದರು.
ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರು. ತಾಲೂಕಿನಲ್ಲಿರೋ ಶಿಥಿಲ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ :ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೇಲ್ಛಾವಣಿ ಕುಸಿತ: ರೋಗಿಗಳಿಗೆ ಸಣ್ಣಪುಟ್ಟ ಗಾಯ - davagere district hospital