ಕರ್ನಾಟಕ

karnataka

ETV Bharat / state

ನಾಲ್ಕು ಲಕ್ಷಕ್ಕೆ ಬಾಲಕನನ್ನು ಮಾರಾಟ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ: ಎಸ್ಪಿ ಹೇಳಿದ್ದೇನು? - CHILD SELLING CASE

ಏಳು ವರ್ಷ ಬಾಲಕನನ್ನು ನಾಲ್ಕು ಲಕ್ಷಕ್ಕೆ ಮಾರಾಟ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Four arrested in Belagavi for selling seven-year-old boy for Rs 4 lakh
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Jan 22, 2025, 7:30 PM IST

ಬೆಳಗಾವಿ:ಮಕ್ಕಳ ಮಾರಾಟ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಮಕ್ಕಳ ಕಳ್ಳಸಾಗಣೆ ಸಂಬಂಧ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ 7 ವರ್ಷದ ಬಾಲಕನ್ನು ಮಾರಾಟ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಸುಲ್ತಾನಪುರ ಮೂಲದ ಸದಾಶಿವ ಶಿವಬಸಪ್ಪ ಮಗದುಮ್ (ಮಗುವಿನ ಮಲತಂದೆ), ಲಕ್ಷ್ಮಿ ಗೋಲಬಾಂವಿ, ಕೊಲ್ಹಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್, ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಳಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಡಮನಿ ಬಂಧಿತ ಆರೋಪಿಗಳು. ಇನ್ನು ಬಾಲಕನನ್ನು ಮಕ್ಕಳ ಕಲ್ಯಾಣ ಮಂಡಳಿಗೆ ಪೊಲೀಸರು ಒಪ್ಪಿಸಿದ್ದಾರೆ.

ಮಗು ಮಾರಾಟ ಪ್ರಕರಣ ಕುರಿತು ಮಾಹಿತಿ ನೀಡುತ್ತಿರುವುದು (ETV Bharat)

’ಫೋನ್ ಸ್ವಿಚ್ಡ್​ ಆಫ್ ಮಾಡಿ ಪರಾರಿಯಾಗಿದ್ದರು’:ಆರೋಪಿ ಲಕ್ಷ್ಮೀ ಗೋಲಬಾಂವಿ ಮದುವೆ ಮಾಡಿಸುವ ದಲ್ಲಾಳಿ ಕೆಲಸ ಮಾಡುತ್ತಿದ್ದು, ಇದೇ ಗ್ರಾಮದ ಸದಾಶಿವ ಮಗದುಮ್ಮ ಹಾಗೂ ಹಾವೇರಿ ಜಿಲ್ಲೆಯ ಬ್ಯಾತನಾಳ ಗ್ರಾಮದ ಸಂಗೀತಾಳ ಜೊತೆಗೆ ನಾಲ್ಕು ತಿಂಗಳ ಹಿಂದೆ ಎರಡನೇ ಮದುವೆ ಮಾಡಿಸಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಸಂಗೀತಾಗೆ ಈಗಾಗಲೇ ಏಳು ವರ್ಷದ ಬಾಲಕನಿದ್ದನು. ಮದುವೆ ನೆಪದಲ್ಲಿ ಸಂಗೀತಾ ಜೊತೆಗೆ ಸ್ನೇಹ ಬೆಳೆಸಿದ ಲಕ್ಷ್ಮೀ ನಿನ್ನ ಮಗುವನ್ನು ನಾನು ನೋಡಿಕೊಳ್ಳುತ್ತೇನೆಂದು ಹೇಳಿ ನಂಬಿಸಿದ್ದಳು. ಹೊಸದಾಗಿ ಮದುವೆಯಾಗಿದ್ದೀರಿ, ನೀವು ಚನ್ನಾಗಿರಿ ಅಂತ ಹೇಳಿ, ಏಳು ವರ್ಷದ ಮಗುವನ್ನು ತನ್ನ ಸ್ನೇಹಿತೆಯರಾದ ಕೊಲ್ಹಾಪುರದ ಸಂಗೀತಾ ಹಾಗೂ ಹಳಿಯಾಳದ ಅನುಸೂಯಾ ಜೊತೆಗೆ ಸೇರಿ ಮಾರಾಟ ಮಾಡಿದ್ದಳು. ಬಾಲಕನನ್ನು 4 ಲಕ್ಷ ರೂ.ಗೆ ಬೆಳಗಾವಿ ಮೂಲದ ದಿಲ್ ಶಾನ್ ಎಂಬ ಮಹಿಳೆಗೆ ಮಾರಾಟ ಮಾಡಿದ್ದರು.

ಪರಿಶೀಲನೆಯಲ್ಲಿ ಪೊಲೀಸರು (ETV Bharat)

ಈ ವೇಳೆಯಲ್ಲಿ ಆರೋಪಿಗಳು ಬಾಲಕನ ತಂದೆ, ತಾಯಿ ಯಾರು ಇಲ್ಲ ಎಂದು ನಂಬಿಸಿದ್ದರು. ಮಗು ಖರಿದೀಸಿದ ದಿಲ್ ಶಾನ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಂದು ಬರೆದುಕೊಡುವಂತೆ ಆರೋಪಿಗಳಿಗೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಒಪ್ಪದ ಆರೋಪಿಗಳು, ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಇನ್ನು ಬಾಲಕನನ್ನು ಖರಿದೀಸಿದ್ದ ದಿಲ್ ಶಾನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹೀಗಾಗಿ ಗಂಡು ಮಗು ಇರಲಿ ಎನ್ನುವ ಕಾರಣಕ್ಕೆ ಮಗುವನ್ನು ಖರೀದಿ ಮಾಡಿದ್ದರು. ಮಗು ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ್ದ ಲಕ್ಷ್ಮೀ, ಫೋನ್ ಸ್ವಿಚ್ ಆಫ್ ಮಾಡಿದಕ್ಕಾಗಿ ಗಾಬರಿಯಾದ ತಾಯಿ ಸಂಗೀತಾ, ತನ್ನ ಮಗುವನ್ನು ಪತ್ತೆ ಮಾಡುವಂತೆ ಎನ್​ಜಿಓ ಮೂಲಕ ಹುಕ್ಕೇರಿ ಪೊಲೀಸರಿಗೆ ದೂರು ನೀಡಿದ್ದರು.

4 ಲಕ್ಷ ರೂಪಾಯಿಯಲ್ಲಿ ಎಲ್ಲರಿಗೂ ಪಾಲು ಹೋಗಿತ್ತು:ದೂರು ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು, ಕೇವಲ ನಾಲ್ಕು ದಿನದಲ್ಲಿ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಮಗುವನ್ನು ರಕ್ಷಣೆ ಮಾಡಿದ್ದರು. ಪೊಲೀಸ್ ತನಿಖೆ ವೇಳೆಯಲ್ಲಿ ಸಂಗೀತಾ ಎರಡನೇ ಪತಿ ಸದಾಶಿವ ಮಗದುಮ್ಮ ಸಹ ಈ ಜಾಲದಲ್ಲಿ ಇರುವುದು ಪತ್ತೆಯಾಗಿದೆ. 4 ಲಕ್ಷ ರೂಪಾಯಿಯಲ್ಲಿ ಎಲ್ಲರಿಗೂ ಪಾಲು ಹೋಗಿತ್ತು ಎಂಬ ವಿಚಾರ ಗೊತ್ತಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಾ. ಭೀಮಾಶಂಕರ್ ಗುಳೇದ್ ವಿವರಿಸಿದರು.

ಪರಿಶೀಲನೆಯಲ್ಲಿ ಪೊಲೀಸರು (ETV Bharat)

ಆರೋಪಿ ಲಕ್ಷ್ಮೀ ಗೋಲಬಾಂಬಿ ತುಮಕೂರು, ಶಿವಮೊಗ್ಗ ಕಡೆಯಲ್ಲಿ ಎರಡನೇ ಮದುವೆ ಮಾಡಿಸುವ ದೊಡ್ಡ ಜಾಲ ಹೊಂದಿದ್ದಾಳೆ.‌ ಅಲ್ಲದೇ ಗೋವಾ, ಮಹಾರಾಷ್ಟ್ರ ಕಡೆಯಲ್ಲೂ ಆಕೆಗೆ ಏಜೆಂಟ್​ಗಳಿದ್ದಾರೆ. ಹಾಗಾಗಿ, ಎರಡನೇ ಮದುವೆ ಆಗುವ ಮಹಿಳೆಯರ ಮಕ್ಕಳನ್ನು ಇವರು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲೂ ಅದೇ ಆಗಿದೆ. ಸಂಗೀತಾಳನ್ನು ಮದುಗೆ ಆಗಿರುವ ಸದಾಶಿವನಿಗೆ ಈಗಾಗಲೇ ಎರಡು ಮಕ್ಕಳಿದ್ದು, ಸಂಗೀತಾಳ ಮಗುವಿನ ಜೊತೆಗೆ ಹೊಂದಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾರಾಟ ಮಾಡಿದ್ದಾರೆ. ಅಲ್ಲದೇ ಸಂಗೀತಾಗೆ ಎರಡು ತಿಂಗಳ ಬಳಿಕ ಮಗುವನ್ನು ವಾಪಸ್​​ ತಂದು ಕೊಡುತ್ತೇನೆ ಅಂತಾನೂ ಆರೋಪಿಗಳು ಹೇಳಿದ್ದರಂತೆ. ಆದರೆ, ಯಾವಾಗ ಮಗುವನ್ನು ಮರಳಿಸಲಿಲ್ಲವೋ ಆಗ ಸಂಗೀತಾ ನಮ್ಮ ಮೂಲಕ ದೂರು ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಸ್ಪಂದನಾ ಸಂಸ್ಥೆಯ ಸುಶೀಲಾ ತಿಳಿಸಿದರು.

ಇದನ್ನೂ ಓದಿ:ಮಗು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಬೆಂಗಳೂರಲ್ಲಿ ಏಳು ಜನ ಆರೋಪಿಗಳ ಬಂಧನ - ನ್ಯಾಯಾಂಗ ಬಂಧನ

ABOUT THE AUTHOR

...view details