ಮಂಡ್ಯ :ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರಗಳ್ಳತನ ಮತ್ತು ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿಂದ 46.57 ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸರಗಳ್ಳತನ ಪ್ರಕರಣ ಸಂಬಂಧ ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶೃಂಗಾರ್(25), ಕನ್ನಲಿ ಗ್ರಾಮದ ಚೇತನ್(25) ಎಂಬವರನ್ನು ಬಂಧಿಸಲಾಗಿದೆ. ಶೃಂಗಾರ್ ಕನ್ನಡ ಚಲನಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ನಟಿಸುತ್ತಿದ್ದ. ಫೆ.9 ರಂದು ಆರೋಪಿಗಳು ಮದ್ದೂರಿನ ಲೀಲಾವತಿ ಬಡಾವಣೆಯ ಪ್ರೇಮ ಎಂಬುವರು ಮುಡುಕತೋರೆ ದೇವಸ್ಥಾನಕ್ಕೆ ತೆರಳುವ ವೇಳೆ ಅವರ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದರು. ಇವರು 8 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಬಂಧಿತರಿಂದ 24.20 ಲಕ್ಷ ಮೌಲ್ಯದ 286 ಗ್ರಾಂ ಚಿನ್ನದ ಒಡವೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳು :ಮನೆಗಳ್ಳತನ ಪ್ರಕರಣ ಸಂಬಂಧ ಮೈಸೂರಿನ ವಿದ್ಯಾರಣ್ಯಪುರದ ಅನಂತ(35) ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬೈರಾಪಟ್ಟಣದ ಕೆ.ಪ್ರಸನ್ನ(40) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು 2024ರ ಆಗಸ್ಟ್ 22 ರಂದು ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಚಿಕ್ಕಬಸವಣ್ಣ ಎಂಬುವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದರು. ಬಂಧಿತರಿಂದ 22.37 ಲಕ್ಷ ಮೌಲ್ಯದ 301 ಗ್ರಾಂ ಚಿನ್ನದ ಒಡವೆ, 5 ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.