ಬೆಂಗಳೂರು: ಚೆಸ್ ಮತ್ತು ವಿಜ್ಞಾನ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಕ್ರೀಡಾಪಟುಗಳು ವಿಜ್ಞಾನ ವಿದ್ಯಾರ್ಥಿಗಳ ಹಾಗೆ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಚೆಸ್ ಕ್ರೀಡೆಯಲ್ಲಿ ಕಂಪ್ಯೂಟರ್ಗಳ ಬಳಕೆಯಿದೆ. ಚೆಸ್ ಕ್ರೀಡೆ ಅಭ್ಯಸಿಸುವ ಪ್ರೋಗ್ರಾಮ್ ಕೂಡ ಚಾಲ್ತಿಯಲ್ಲಿದೆ. ಸೂಪರ್ ಕಂಪ್ಯೂಟರ್ ಬೆಸ್ಟ್ ಚೆಸ್ ಪಟುವನ್ನು ಸೋಲಿಸಿ ದಾಖಲೆ ಬರೆದಿರುವುದು ಸಾಮ್ಯತೆಗೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ಐದು ಬಾರಿ ಚೆಸ್ ವಿಶ್ವಚಾಂಪಿಯನ್, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ವಿಶ್ವನಾಥನ್ ಆನಂದ್ ಹೇಳಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವರ್ಷದ ಘಟಿಕೋತ್ಸವ ಕ್ಯಾಂಪಸ್ನಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಚೆಸ್ ಕ್ರೀಡೆ ಕಲಿಯಲು ಪ್ರಾರಂಭಿಸಿದಾಗ ತುಂಬಾ ಸರಳ ವಿಧಾನಗಳಿದ್ದವು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಹೊಸ ತಂತ್ರಜ್ಞಾನದ ಹಾಗೆ ಚೆಸ್ನಲ್ಲೂ ಎಷ್ಟೋ ಕಾರ್ಯವಿಧಾನ ಬದಲಾಗಿದೆ. ಈಗ ಚೆಸ್ ಕ್ರೀಡೆಯಲ್ಲೂ ಸಾಕಷ್ಟು ಹೊಸ ಪಟ್ಟುಗಳು ಮುನ್ನೆಲೆಗೆ ಬಂದಿದ್ದು, ವಿಜ್ಞಾನದ ಹಾಗೆ ಒಂದೇ ವಿಧಾನ ಉಪಯೋಗಕ್ಕೆ ಬರುವುದಿಲ್ಲ ಎಂದು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನಗಳು ಈಗ ಸಾಕಷ್ಟು ಮುನ್ನೆಲೆಗೆ ಬರುತ್ತಿವೆ. ಆದರ ಜೊತೆ ಹೊಸ ಹೊಸ ತಲೆಮಾರು ತನನ್ನು ತಾನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದರಿಂದ ಜಾಗತಿಕವಾಗಿ ಜೀವನದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದೆ ಎಂದು ಹೇಳಿದರು.