ಮೈಸೂರು: "ಸಿಎಂ ಸಿದ್ದರಾಮಯ್ಯರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನನ್ನ ವಿರುದ್ಧ ಸಾಲು ಸಾಲು ಎಫ್‌ಐಆರ್‌ಗಳು ದಾಖಲಾಗಿವೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸಬೇಕು, ಮನೆಯಿಂದ ಹೊರಬರಬಾರದು ಎಂಬ ಉದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಮುದಾಯವೊಂದರ ಸಾವಿರಾರು ಮಂದಿ ಸೇರಿ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ನಾವು ಮತ್ತು ವಿರೋಧ ಪಕ್ಷದ ನಾಯಕ ಅಶೋಕ್ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೆವು. ಆದರೆ ನಾನು ಆ ದಿನ ಮಾಧ್ಯಮಗಳ ಜೊತೆ ಮಾತನಾಡಿದ್ದು ತಪ್ಪು ಎಂಬಂತೆ ಬಿಂಬಿಸಿ, ನನ್ನ ವಿರೋಧ ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೆಲ್ಲಾ ಹೆದರುವುದಿಲ್ಲ" ಎಂದರು.
ಪ್ರತಾಪ್ ಸಿಂಹಗೆ ಎಫ್‌ಐಆರ್‌ಗಳು ಹೊಸದಲ್ಲ-ಅಶೋಕ್:ಮತ್ತೊಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, "ಮಾಜಿ ಸಂಸದ ಪ್ರತಾಪ್ ಸಿಂಹಗೆ ಎಫ್‌ಐಆರ್‌ಗಳು ಹೊಸದಲ್ಲ. ಪ್ರತಿನಿತ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗುತ್ತವೆ. ಅದಕ್ಕೆಲ್ಲಾ ಹೆದರುವವರಲ್ಲ. ಉದಯಗಿರಿ ಗಲಾಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಕಲ್ಲೆಸೆದ ಕಿಡಿಗೇಡಿಗಳನ್ನು ಬಂಧಿಸಿ, ಪೊಲೀಸರಿಗೆ ರಕ್ಷಣೆ ಕೊಡಿಬೇಕೆಂದು ಆಗ್ರಹಿಸಿ ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವೆ. ಕೋರ್ಟ್‌ನಿಂದ ಬರುವ ಆದೇಶಕ್ಕಾಗಿ ಕಾಯುತ್ತಿದ್ದೇವೆ" ಎಂದರು.