ಮೈಸೂರು: ನಗರದ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡೋದ್ರಲ್ಲಿ ತಪ್ಪೇನಿದೆ? ಎಂದಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಬಗ್ಗೆ ಪ್ರತಾಪ್ ಸಿಂಹ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನಗೆ ಕಾಂಗ್ರೆಸ್ಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ. ನಮ್ಮದು ಸೈದ್ಧಾಂತಿಕ ಬದ್ಧತೆ ಇರುವ ಪಕ್ಷ. ಕಾಂಗ್ರೆಸ್ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ?. ಆ ಪಕ್ಷದಿಂದ ಯಾರ‍್ಯಾರು ಫೋನ್ ಮಾಡಿ ನನಗೆ ಟಿಕೆಟ್ ಆಫರ್ ಮಾಡಿದ್ದರು ಎಂದು ಅವರ ಬಳಿ ಕೇಳಿ ನೋಡಿ. ಹೋಗುವುದಿದ್ದರೆ ಆಗಲೇ ಹೋಗುತ್ತಿದ್ದೆ" ಎಂದು ಸ್ಪಷ್ಟನೆ ನೀಡಿದರು.
"ನಾನು ಬಕೆಟ್ ಹಿಡಿಯುತ್ತಿದ್ದೇನೆ ಎಂದು ಪಕ್ಷದ ಕೆಲವರು ಹೇಳುತ್ತಿದ್ದಾರೆ. ಅವರ ಮಾತು ಸಭ್ಯತೆ ಮೀರಬಾರದು. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು. ನನ್ನ ವಿರುದ್ಧ ಸಾಕಷ್ಟು ಕೇಸ್ ಹಾಕಿಸಿದರು. ನಾನು ಬದ್ಧತೆ ಇರುವ ವ್ಯಕ್ತಿ, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.