ಬೆಂಗಳೂರು: "ಎಲ್ಲಾ ಸಮುದಾಯದವರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂ ಹುದ್ದೆ ವಿಚಾರವಾಗಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, "ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಿ ಇನ್ನೂ ಐದು ಜನರನ್ನು ಡಿಸಿಎಂ ಮಾಡಿದರೂ ಒಳ್ಳೆಯದು" ಎಂದು ಹೇಳಿದರು.
"ಡಿ.ಕೆ ವಿಚಾರ ಅಥವಾ ಮತ್ತೊಂದು ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಎಂಟು ಬಾರಿ ಗೆದ್ದ ರಾಮಲಿಂಗಾ ರೆಡ್ಡಿ ಇದ್ದಾರೆ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಜಮೀರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಹಾಗೂ ಆರ್.ವಿ.ದೇಶಪಾಂಡೆ ಇದ್ದಾರೆ. ಎಲ್ಲರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು" ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಕೇಂದ್ರ ಸಚಿವರಾದ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಹಾಗೂ ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರ ರಾಜಕಾರಣವೂ ನಡೆಯಲ್ಲ, ಅವರ ದಿನಚರಿಯೂ ನಡೆಯಲ್ಲ. ಹೀಗಾಗಿ ಅವರ ರಾಜಕಾರಣಕ್ಕೆ ನನ್ನ ಎಳೆದು ತರುತ್ತಾರೆ. ಚನ್ನಪಟ್ಟಣ ತ್ಯಜಿಸಿ ಮಂಡ್ಯಕ್ಕೆ ಹೋದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಮಾಡಿದ ಕಾರ್ಯಕ್ರಮ, ಸಭೆ ಬಗ್ಗೆ ಎಲ್ಲಾ ದಾಖಲೆ ಇದೆ" ಎಂದು ಹೇಳಿದರು.