ಮೈಸೂರು: ಮೂಡಾದ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಬಿಜೆಪಿ ಪಕ್ಷ ತೊರೆಯುವುದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮಾಜಿ ಶಾಸಕ ಎಲ್ ನಾಗೇಂದ್ರ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಿಎಂ ನೇತೃತ್ವದಲ್ಲಿ ರಾಜೀವ್ ಅವರು ನಾಳೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂಬ ಮಾಹಿತಿ ಸುದ್ದಿ ಮಾಧ್ಯಗಳಿಂದ ತಿಳಿದು ಬಂದಿದೆ. ರಾಜೀವ್ ಬಿಜೆಪಿ ಪಕ್ಷ ತೊರೆಯುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ. ಅವರನ್ನ ಮನವೊಲಿಸುವ ಪ್ರಯತ್ನ ಮಾಡುವುದಿಲ್ಲ. ಅವರು ಕಳೆದ ವಿಧಾನಸಭೆ ಚನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಯಾರೋ ಇಬ್ಬರು ಮೂವರು ಬಿಜೆಪಿ ಪಕ್ಷದಿಂದ ಹೋದರೆ, ನಮ್ಮ ಪಕ್ಷಕ್ಕೆ ಸಾವಿರಾರು ಜನರು ಬರುತ್ತಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ವೇಳೆ ಪಕ್ಷಾಂತರ ಸಾಮಾನ್ಯ. ರಾಜೀವ್ ಬಿಜೆಪಿ ಪಕ್ಷದ ವಿರುದ್ಧ ಇರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಒಕ್ಕಲಿಗ ವಿರೋಧಿ:ಕಾಂಗ್ರೆಸ್ ಪಕ್ಷ ಒಕ್ಕಲಿಗ ವಿರೋಧಿ ಪಕ್ಷವಾಗಿದ್ದು, ಒಕ್ಕಲಿಗರಿಗೆ ಟಿಕೆಟ್ ಕೊಡಲು 41 ವರ್ಷ ಬೇಕಿತ್ತಾ? 41 ವರ್ಷದಿಂದ ಯಾರೊಬ್ಬ ಒಕ್ಕಲಿಗರು ಇರಲಿಲ್ಲವಾ? ಹಾಳಾದ ಊರಿಗೆ ಉಳಿದವನೇ ಗೌಡ ಎಂಬ ಮಾತಿನಂತೆ ಲಕ್ಷ್ಮಣ್ಗೆ ಟಿಕೆಟ್ ನೀಡಲಾಗಿದೆ. ಇದಕ್ಕೂ ಮುಂಚೆ ಯಾವುದೇ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಅವಕಾಶ ಕೊಟ್ಟಿರಲಿಲ್ಲ. ನಿಜವಾಗಿಯೂ ಕಾಂಗ್ರೆಸ್ ಪಕ್ಷ ಒಕ್ಕಲಿಗರ ವಿರೋಧಿ ಎಂದು ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಾಳೆ ವಿಜಯೇಂದ್ರ ಮೈಸೂರಿಗೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಳೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆದು ಬಳಿಕ, ಮಡಿಕೇರಿಯ ಪ್ರವಾಸ ಕೈಗೊಳ್ಳಲಿದ್ದಾರೆ. ನಂತರ ಮತ್ತೆ ಸಂಜೆ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ ಡಿ ಕುಮಾಸ್ವಾಮಿ ಹಾಗೂ ಇತರ ಮುಖಂಡರರ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ ಎಂದರು.
ಇದನ್ನೂ ಓದಿ:ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ: ಹಾಸನಕ್ಕೆ ಪ್ರಜ್ವಲ್ ರೇವಣ್ಣ ಫಿಕ್ಸ್, ಕೋಲಾರಕ್ಕೆ ಯಾರು? - Lok Sabha Elections