ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಶಿರಸಿ (ಉತ್ತರ ಕನ್ನಡ) : ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ (ಕೆನರಾ) ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬುಧವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ. ಟಿಕೆಟ್ ನೀಡಿ ಅರ್ಜಿ ಹಾಕಿಲ್ಲ. ಸರ್ವೆ ಪ್ರಕಾರ ಯಾರಿಗೆ ಆಯ್ಕೆ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ನ ಮೊದಲ ಪಟ್ಟಿ ವಾರದೊಳಗೆ ಬಿಡುಗಡೆಯಾಗಲಿದೆ. ಯಾರಿಗೆ ಟಿಕೆಟ್ ನೀಡಿದರೂ, ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯ 4 ವಿಧಾನಸಭಾ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಎಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದ ಅಂಜಲಿ, ಉತ್ತರಕನ್ನಡ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ ಸ್ಪರ್ಧಿಸಲು ಆಸಕ್ತಿಯಿದೆ ಎಂದು ತಿಳಿಸಿದರು.
ಸ್ಪರ್ಧೆ ಮಾಡಿದಲ್ಲಿ ಜನರ ಮನಸ್ಸಲ್ಲಿ, ದೇವರ ಮನಸ್ಸಲ್ಲಿ ಏನಿದೆ? ಎಂದು ಕಾದು ನೋಡೋಣ. ಆದರೆ ಖಂಡಿತವಾಗಿ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ಇದನ್ನೂ ಓದಿ :ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ: ಶಾಸಕ ಹಲಗೇಕರ್ಗೆ ನಿಂಬಾಳ್ಕರ್ ಸವಾಲು