ಬೆಂಗಳೂರು:ಕಾಂಗ್ರೆಸ್ನ ಮಾಜಿ ಶಾಸಕ, ದಲಿತ ಮುಖಂಡ ಅಖಂಡ ಶ್ರೀನಿವಾಸ ಮೂರ್ತಿ ನಾಳೆ (ಬುಧವಾರ) ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಶ್ರೀನಿವಾಸ ಮೂರ್ತಿ ಅವರನ್ನು ಪಕ್ಷಕ್ಕೆ ಕರೆತರುತ್ತಿದೆ.
ಏಪ್ರಿಲ್ 17ರಂದು ಬೆಳಗ್ಗೆ 9 ಗಂಟೆಗೆ ಹಾಲಿ ಬಿಎಸ್‌ಪಿ ಸದಸ್ಯರಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಮಲ ಪಕ್ಷ ಸೇರಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಕಡೆಗಣಿಸಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ವೇಳೆ ದುಷ್ಕರ್ಮಿಗಳು ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದರು. ಈ ವೇಳೆ ನೆರವಿಗೆ ಧಾವಿಸದ ಸ್ವಪಕ್ಷದವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
ನಂತರ ಕಾಂಗ್ರೆಸ್ ತೊರೆದು ಬಿಎಸ್‌ಪಿ ಸೇರಿದ್ದರು. ಅಲ್ಲದೇ, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಪುಲಿಕೇಶಿ ನಗರ ಕ್ಷೇತ್ರವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ. ಅಖಂಡ ಅವರ ಸೇರ್ಪಡೆ ಕ್ಷೇತ್ರದ ದಲಿತ ಮತಗಳನ್ನು ಬಿಜೆಪಿಗೆ ಸೆಳೆಯಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 15 ದಿನಗಳಿಂದ ಬಿಜೆಪಿ ಸೇರುವ ಚರ್ಚೆ ನಡೆದಿತ್ತು. ಯುಗಾದಿವರೆಗೂ ಸಮಯ ಪಡೆದಿದ್ದ ಅಖಂಡ ಇದೀಗ ಹೊಸ ವರ್ಷದ ನಂತರ ಹೊಸ ರಾಜಕೀಯ ಜೀವನ ಆರಂಭಕ್ಕೆ ಬಿಜೆಪಿ ಸೇರಲು ಸಮ್ಮತಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಗೆ ರಾಜೀನಾಮೆ ನೀಡಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ