ಕರ್ನಾಟಕ

karnataka

ETV Bharat / state

ದೇವೇಗೌಡರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ: ಸಿ.ಎಸ್.ಪುಟ್ಟರಾಜು - PUTTARAJU WARNS CHALUVARAYA SWAMY

ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದರೆ ಎಚ್ಚರವಿರಲಿ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಪುಟ್ಟರಾಜು ಗರಂ ಆದರು.

ಸಚಿವ ಚಲುವರಾಯಸ್ವಾಮಿಗೆ ಮಾಜಿ ಸಚಿವ ಪುಟ್ಟರಾಜು ಎಚ್ಚರಿಕೆ
ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು (ETV Bharat)

By ETV Bharat Karnataka Team

Published : Nov 11, 2024, 9:43 AM IST

ಮಂಡ್ಯ:"ಮಾಜಿ ಪ್ರಧಾನಿ ಹೆಚ್​​​.ಡಿ.ದೇವೇಗೌಡರು ಹಾಗೂ ಕೇಂದ್ರ ಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್​.ಚಲುವರಾಯಸ್ವಾಮಿ ಅವರು ಲಘುವಾಗಿ ಮಾತನಾಡಿದ್ದು, ಅವರ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು" ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಲುವರಾಯಸ್ವಾಮಿ 1995ರಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರ ಅದೃಷ್ಟ ಚೆನ್ನಾಗಿದೆ. ಹೊಸ ಅಭ್ಯರ್ಥಿಗಳನ್ನು ರಾಜಕೀಯಕ್ಕೆ ತಂದು, ಆರ್ಥಿಕವಾಗಿ ಬಲಿಷ್ಠರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದಿರುವ ವ್ಯಕ್ತಿ" ಎಂದು ಟೀಕಿಸಿದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸಚಿವ ಚಲುವರಾಯಸ್ವಾಮಿ ವಿರುದ್ಧ ಗರಂ (ETV Bharat)

"ನಾನು ಹೆಚ್.ಡಿ.ದೇವೇಗೌಡರನ್ನು 45 ವರ್ಷಗಳಿಂದ ತಿಳಿದಿದ್ದು, ಅವರು ಭಾವನಾತ್ಮಕ ಜೀವಿ. ರೈತರ ಮೇಲೆ ಅವರಿಗಿರುವ ಸಹಾನುಭೂತಿಯನ್ನು ಬಹಳ ಹತ್ತಿರದಿಂದ ತಿಳಿದಿದ್ದೇನೆ. ಅವರು ಹೃದಯದಿಂದ ಮಾತನಾಡುತ್ತಾರೆ" ಎಂದರು.

ದೇವೇಗೌಡರು ಪ್ರಧಾನಿಯಾಗಿ 11 ತಿಂಗಳು, ಮುಖ್ಯಮಂತ್ರಿಯಾಗಿ 17 ತಿಂಗಳು ಮಾತ್ರ ಅಧಿಕಾರ ನಡೆಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದು, ದೇವೇಗೌಡರು ನಿಮ್ಮಂತೆ ಪಕ್ಷ ಬದಲಾಯಿಸಿಲ್ಲ ಎಂದು ಪುಟ್ಟರಾಜು ವಾಗ್ದಾಳಿ ನಡೆಸಿದರು. ಜೊತೆಗೆ, ದೇವೇಗೌಡರ ನಡಾವಳಿಗಳನ್ನು ವಿಧಾನಸೌಧದ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆಯೂ ಸ್ಟೀಲ್ ಕಂಪನಿಗಲಿಂದ ಹಣ ವಸೂಲಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಎಂಬುದನ್ನು ಮರೆತು ಮಾತನಾಡುತ್ತಿದ್ದೀರಿ, ಅವರು ಸಮರ್ಥವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಣವೇ ಬೇಕಿದ್ದರೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಲಾಟರಿ ಮತ್ತು ಸರಾಯಿಯನ್ನು ಏಕೆ ರದ್ದುಗೊಳಿಸಿದರು ಎಂದು ಅವರು ಪ್ರಶ್ನಿಸಿದರು.

ಚನ್ನಪಟ್ಟಣದ ಜನತೆ ದೇವೇಗೌಡರು, ಕುಮಾರಸ್ವಾಮಿ ಮಾಡಿರುವ ಕೆಲಸಗಳನ್ನು ನೆನೆದು ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡುವ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ನೆಲೆಯೂರಿ ನಿಖಿಲ್​​ ಗೆಲ್ಲಿಸಲು ಪಣತೊಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ದೊಡ್ಡ ನಾಯಕರಾಗುತ್ತೇವೆ ಎಂಬ ಮನಸ್ಥಿತಿಯಿದ್ದರೆ, ಅದನ್ನು ಬಿಡಬೇಕು ಎಂದು ಟೀಕಿಸಿದರು.

ವಿಧಾನಪರಿಷತ್​ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, "ಅಧಿಕಾರಸ್ಥರು ತಾಳ್ಮೆ ವಹಿಸಬೇಕು. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುತ್ತಾರೆ. ನೀವು ತಾಳ್ಮೆಯಿಂದ ಉತ್ತರ ನೀಡಿ, ಸಮಸ್ಯೆ ಬಗೆಹರಿಸಬೇಕು. ತಾಳ್ಮೆ ವಹಿಸದಿದ್ದರೆ ಕೀಲಾರ ಜಯರಾಮ್​ ಜೊತೆ ನಡೆದಂತಹ ಘಟನೆಗಳು ಸಂಭವಿಸುತ್ತವೆ. ಸಾತನೂರು, ಕೋಡಂಬಳ್ಳಿ ವ್ಯಾಪ್ತಿಯಲ್ಲಿ ಮಂಡ್ಯ ಜಿಲ್ಲೆಯವರೇ ಪೂರ್ಣ ಆವರಿಸಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಹಾಗೂ ಅಭ್ಯರ್ಥಿ ಯೋಗೇಶ್ವರ್ ನಡುವೆ ಏನು ಭಿನ್ನಾಭಿಪ್ರಾಯ ಇದೆಯೋ ತಿಳಿಯದು. ಅವರು ನಾವು ಪ್ರಚಾರ ಮಾಡುವ ವ್ಯಾಪ್ತಿಯಲ್ಲಿ ಕಂಡುಬಂದಿಲ್ಲ" ಎಂದರು.

ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಮಾಡಿದೆ: ಹೆಚ್.ಡಿ. ದೇವೇಗೌಡ

ABOUT THE AUTHOR

...view details