ಬೆಂಗಳೂರು:ವಾಲ್ಮೀಕಿ ನಿಗಮದ 187 ಕೋಟಿಯಷ್ಟು ಮೊತ್ತದ ದೊಡ್ಡ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದ ಸಭೆಯು ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಜೂ. 28 ರಂದು ಎಲ್ಲ ಜಿಲ್ಲೆಗಳು, ತಾಲೂಕು ಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತ ಬೇರೆಡೆ ವರ್ಗಾವಣೆ ಆಗಿದು ಹೇಗೆ?. ಆದ್ದರಿಂದ, ಈ ಹಗರಣದಲ್ಲಿ ಸಿದ್ದರಾಮಯ್ಯನವರ ಮೇಲೆ ಅನುಮಾನ ಬರುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಚಂದ್ರಶೇಖರ್ ಎಂಬ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದನ್ವಯ 187 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಡೆತ್ ನೋಟ್ನಲ್ಲಿ ಅವರು ಬರೆದಿಟ್ಟಿದ್ದರು ಎಂದರು.
ಸರ್ಕಾರಗಳು ಪರಿಶಿಷ್ಟ ವರ್ಗಗಳ ಸಮುದಾಯದ ಏಳಿಗೆ, ಮಕ್ಕಳ ಭವಿಷ್ಯದ ಸಲುವಾಗಿ ಎಸ್‍ಸಿ, ಎಸ್‍ಟಿಗಳಿಗೆ ಮೂಲಸೌಕರ್ಯ, ಭೂ ಒಡೆತನ, ನೇರ ಸಾಲ, ಉನ್ನತ ಶಿಕ್ಷಣ ಸೇರಿ ಶೇ. 24 ಹಣವನ್ನು ಮೀಸಲಿಡಬೇಕಿದೆ. ಆದರೆ, ಕಳೆದ ವರ್ಷ ಈ ಸಮುದಾಯದ ಏಳಿಗೆಗಾಗಿ ಮೀಸಲಿಟ್ಟ ಸುಮಾರು 11 ಸಾವಿರ ಕೋಟಿ ಮೊತ್ತವನ್ನು ಬೇರೆ ಬೇರೆ ಕಡೆ ವರ್ಗಾಯಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅವರಿಗೆ ಅನ್ಯಾಯ ಮಾಡಿದೆ. ಈ ವರ್ಷ 14 ಸಾವಿರ ಕೋಟಿಯನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. 2 ವರ್ಷಗಳಲ್ಲಿ ದಲಿತರ ಹಣ 25 ಸಾವಿರ ಕೋಟಿಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಶ್ರೀರಾಮುಲು ದೂರಿದರು.