ಬೆಂಗಳೂರು:''ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ನೆರೆ ಹಾವಳಿ ಬಗ್ಗೆ ಬೆಳಕು ಚೆಲ್ಲಿ ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋಗಿರುವುದು ದುರ್ದೈವ. ಹಗರಣಗಳ ವಿಚಾರದಲ್ಲಿಯೂ ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ. ಅಧ್ಯಕ್ಷರು, ವಿರೋಧ ಪಕ್ಷದ ನಾಯಕರ ನಡುವೆ ತಾಳ ಮೇಳವೇ ಇಲ್ಲದ್ದು ವಿಷಾದನೀಯ'' ಎಂದು ಸ್ವಪಕ್ಷದ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
''ಐಟಿ- ಬಿಟಿ ರಾಜಧಾನಿ ಎನಿಸಿರುವ, ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರು ಸೇರಿದಂತೆ, ಅನೇಕ ಜಿಲ್ಲೆಗಳಲ್ಲಿ ಡೆಂಘೀ ತಾಂಡವವಾಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಲಕ್ಷಾಂತರ ಜನ ಮನೆ- ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಬೇಕು. ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋಗಿರುವುದು ದುರ್ದೈವ! ಪ್ರವಾಹಕ್ಕೂ ಮೊದಲು ಈ ಹಿಂದಿನ ವರ್ಷದ ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತಾಡಲೇ ಇಲ್ಲ'' ಎಂದು ಅರವಿಂದ ಲಿಂಬಾವಳಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
''ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ ಮತ್ತು ತಾಳ-ಮೇಳ ಇಲ್ಲದೇ ಹೋದದ್ದು ವಿಷಾದನೀಯ. ಇದರ ಸಂಪೂರ್ಣ ಲಾಭವನ್ನು ಆಡಳಿತ ಪಕ್ಷ ಪಡೆಯಲು ಸಹಾಯಕವಾಯಿತು. ಸಿಕ್ಕ ಅವಕಾಶ ಮತ್ತು ಸಮಯವನ್ನು ಸದನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ, ಇಡೀ ಅಧಿವೇಶನದಲ್ಲಿ ವೃಥಾ ಕಾಲಹರಣ ಮಾಡಿ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸದನದ ಕಲಾಪಗಳನ್ನು ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದ ನಮ್ಮ ಪಕ್ಷದ ನಾಯಕರ ನಡೆ ಪ್ರಶ್ನಾರ್ಹ'' ಎಂದು ಹೊಂದಾಣಿಕೆ ರಾಜಕಾರಣದ ಶಂಕೆ ವ್ಯಕ್ತಪಡಿಸಿದ್ದಾರೆ.