ಬೆಂಗಳೂರು/ರಾಮನಗರ:ರಾಜ್ಯದಲ್ಲೇಮೊದಲ ಬಾರಿಗೆ ಕನ್ನಡದಲ್ಲೇ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಮ್ (70) ಇಂದು ಮೃತಪಟ್ಟಿದ್ದಾರೆ. ಬುಧವಾರ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಂಜೆ ಮೃತಪಟ್ಟಿರುವುದಾಗಿ ಅವರ ಅಳಿಯ ಪ್ರದೀಪ್ ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ 12 ದಿನಗಳಿಂದ ಐಸಿಯೂನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಕೊನೆಯುಸಿರೆಳೆದರು. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವರಾಮ್ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷದ ಮುಖಂಡರು, ಚಿತ್ರ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
ಆರಂಭಿಕ ಜೀವನ: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಉರಗಳ್ಳಿಯಲ್ಲಿ ಎಸ್.ಕೆಂಪಯ್ಯ ಮತ್ತು ತಾಯಿ ಚಿಕ್ಕಬೋರಮ್ಮ ದಂಪತಿಯ ಪುತ್ರನಾಗಿ ಏಪ್ರಿಲ್ 6, 1953ರಂದು ಕೆ.ಶಿವರಾಮ್ ಜನಿಸಿದ್ದರು. ಬಡತನದ ಹಿನ್ನೆಲೆಯುಳ್ಳ ಕುಟುಂಬವಾಗಿದ್ದರಿಂದ ಆರಂಭಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿದ್ದರು. ಬಳಿಕ ಬೆಂಗಳೂರಿಗೆ ತೆರಳಿ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿ.ವಿ.ಪುರಂ ಸಂಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ, 1982ರಲ್ಲಿ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಎ (ಇತಿಹಾಸ) ಪದವಿ ಪಡೆದಿದ್ದರು.
1972ರಲ್ಲಿ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಟೈಪಿಂಗ್ ಮತ್ತು ಶೀಘ್ರ ಲಿಪಿ ಕೋರ್ಸ್ ಪೂರ್ಣಗೊಳಿಸಿದ್ದರು. ಮೇ 1973ರಲ್ಲಿ ಅಪರಾಧ ತನಿಖಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆದಿದ್ದ ಅವರು, ಸೇವೆಯಲ್ಲಿದ್ದಾಗಲೇ ತಮ್ಮ ಅಧ್ಯಯನ ಮುಂದುವರೆಸಿ 1985ರಲ್ಲಿ ಕೆ.ಎ.ಎಸ್. ಪರೀಕ್ಷೆ ಬರೆದು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಯ್ಕೆಯಾಗಿದ್ದರು. 1986ರಲ್ಲಿ, ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ 1ನೇ ರ‍್ಯಾಂಕ್ ಪಡೆದು ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ನಾಗರಿಕ ಸೇವಾ ಪರೀಕ್ಷೆಯನ್ನು (UPSC) ಕನ್ನಡದಲ್ಲೇ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.