ಬೆಂಗಳೂರು: ''ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿಗಳ ಜೊತೆ ಮಾತುಕತೆ ನಡೆಸುವುದು ಸರಿ, ಆದರೆ ಪಕ್ಷದ ಎಲ್ಲಾ ಶಾಸಕರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುವುದು ದೊಂಬರಾಟ'' ಎಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಡಾಲರ್ಸ್ ಕಾಲೋನಿಯಲ್ಲಿನ ಧವಳಗಿರಿ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ತೀವ್ರತರವಾದ ಬರ ಹಾಗೂ ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ. ಆದರೆ, ಇದ್ಯಾವುದರ ಬಗ್ಗೆಯೂ ಗಂಭೀರವಾದ ಪರಿಹಾರ ಕ್ರಮದ ಬದಲು ದೆಹಲಿಗೆ ಎಲ್ಲ ಶಾಸಕರನ್ನು ಕರೆತಂದಿರೋದು ಎಷ್ಟು ಸರಿ'' ಎಂದು ಪ್ರಶ್ನಿಸಿದ್ದಾರೆ.
''ಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಗುರಿ ಇದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಬಹುತೇಕ ಯಶಸ್ವಿ ಆಗುವ ವಿಶ್ವಾಸ ಇದೆ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ, ಅವರ ಪ್ರವಾಸ, ಓಡಾಟ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಿದೆ. ಪಕ್ಷ ಬಲಪಡಿಸಲು ಹೆಚ್ಚು ಒತ್ತು ನೀಡಿದಂತಾಗಿದೆ'' ಎಂದರು.
28 ಕ್ಷೇತ್ರಗಳಲ್ಲೂ ಗೆಲುವು:''ಕಿಸಾನ್ ಸಮ್ಮಾನ್ ಯೋಜನೆ ರೈತರ ಅನುಕೂಲಕ್ಕೆ ಮಾಡಿದ್ದೆವು. ಅದೆಲ್ಲವನ್ನೂ ಸ್ಥಗಿತ ಮಾಡಿ, ಪುಕ್ಕಟೆ ಕಾರ್ಯಕ್ರಮ ಕೊಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕಾರ್ಯಕ್ರಮ ರೂಪಿಸಿದ್ದಾರೆ. ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿದ್ದು, ಜನ ಮೆಚ್ಚಿದ್ದಾರೆ. ಹಾಗಾಗಿ, ಬರುವ ದಿನಗಳಲ್ಲಿ ದೇಶದ ಜನರು, ರಾಜ್ಯದ ಜನರು ಮೋದಿ ಪರವಾಗಿ ನಿಲ್ಲಲಿದ್ದಾರೆ. ರಾಜ್ಯದಲ್ಲಿ ಕೂಡ 28ಕ್ಕೆ 28 ಕ್ಷೇತ್ರ ಗೆಲ್ಲಿಸಲಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.