ಬೆಂಗಳೂರು:ಅಗಲಿದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೃತದೇಹದ ಅಂತಿಮ ವಿಧಿ ವಿಧಾನ ಇಂದು ಅವರ ಹುಟ್ಟೂರು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರದಿಂದ ಹೊರಟಿರುವ ಕೃಷ್ಣ ಅವರ ಪಾರ್ಥಿವ ಶರೀರ ಕೆಂಗೇರಿ ಮಾರ್ಗವಾಗಿ ಮದ್ದೂರು ತಲುಪಲಿದೆ. ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಕಾಲ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಎಸ್. ಎಂ. ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
"ಮಂಡ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಕೆಲವರು ಒತ್ತಾಯಿಸಿದ್ದರು. ಆದರೆ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ, ದಯವಿಟ್ಟು ಸಹಕರಿಸಬೇಕು. ಮಧ್ಯಾಹ್ನ ಮೂರು ಗಂಟೆಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ" ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮನಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆ:ಗಣ್ಯರು ಸೇರಿ ಮಠಾಧೀಶರು ಹಾಗು ವಿಐಪಿಗಳು ಸೋಮನಹಳ್ಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗೆ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಮೂವರು SP, ಮೂವರು ASP, 10 DYSP, 30CPI, 50 PSI ಗೆ ಮೇಲುಸ್ತುವಾರಿ ವಹಿಸಲಾಗಿದೆ. 10 KSRP ತುಕಡಿ, 6 DR ತುಕಡಿ, 200 ಗೃಹರಕ್ಷಕ ಸಿಬ್ಬಂದಿ, 1000 ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಹಾಗೇ ಪಾರ್ಕಿಂಗ್, ಆಸನ ವ್ಯವಸ್ಥೆ ಸೇರಿದಂತೆ ಇತರ ಕೆಲಸಗಳು ಪೂರ್ಣಗೊಂಡಿದ್ದು, ಹಳೇ ಮೈ-ಬೆಂ ಹೆದ್ದಾರಿ ಸಂಚಾರ ಬದಲು ಸಾಧ್ಯತೆ ಇದೆ.
ಮಂಡ್ಯ ಡಿಸಿಯಿಂದ ಪ್ರಕ್ರಿಯೆಯ ಮಾಹಿತಿ: "3 ಎಕರೆ ಪ್ರದೇಶದಲ್ಲಿ ಎಲ್ಲಾ ಸಿದ್ಧತೆಗಳನ್ನು ನಿನ್ನೆಯಿಂದ ಪ್ರಾರಂಭ ಮಾಡಿದ್ದೇವೆ. ಎಲ್ಲಾ ಸಿದ್ಧತೆಯ ಪ್ರಕ್ರಿಯೆಗಳು ಕೂಡ ಈಗ ಪೂರ್ಣಗೊಂಡಿದೆ. ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿನ್ನೆಯಿಂದ ಸಾರ್ವಜನಿಕರಿಗೆ ದರ್ಶನಕ್ಕಾಗಿ ವ್ಯವಸ್ಥೆಯನ್ನು ಮಾಡಿದ್ದರು. ಬೆಂಗಳೂರಿನಿಂದ ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಬರುತ್ತಿದ್ದು, ಇಲ್ಲಿಗೆ ತಲುಪಿದ ನಂತರ ಮಧ್ಯಾಹ್ನ 2:30 ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು. ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ".