ಬೆಂಗಳೂರು: ಬರ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯ ಬಗ್ಗೆ ಕೇಂದ್ರದ ಕಡೆ ಕೈ ತೋರಿಸುವ ಕಾಂಗ್ರೆಸ್ ಸರ್ಕಾರ, ಬರದಿಂದ ನೊಂದಿರುವ ಜನರಿಗೆ ಏನು ಮಾಡಿದೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿದ ಹೆಚ್ಡಿಕೆ, ಕೇಂದ್ರ ಸರ್ಕಾರ 3,454 ಕೋಟಿ ರೂ. ಪರಿಹಾರ ನೀಡಿದೆ. ಕಡಿಮೆ ಬಂದಿದೆ ಎಂದರೆ ಕೇಳಲಿ, ಅದು ಬಿಟ್ಟು ರಾಜಕೀಯ ಮಾಡಿಕೊಂಡಿದ್ದರೆ ಉಪಯೋಗವೇನು? ಎಂದರು.
ಹಣ ಬಿಡುಗಡೆ ಮಾಡುವಾಗ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಹಣ ಸಾಕಾಗಲಿಲ್ಲ ಎಂದರೆ ಇವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆ ಎನ್ನುವುದು ಇದೆಯಲ್ಲ. 15 ನೇ ಹಣಕಾಸಿನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ಹಣ ಬರುತ್ತದೆ. ರಾಜ್ಯದಲ್ಲಿ ತೀವ್ರ ಬರವಿದೆ, ಅದಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ? ₹2000 ಕೊಡುತ್ತೇವೆ ಎಂದರು. ಯಾರಿಗೆ ಹೋಗಿದೆ? ಎಷ್ಟು ಜನಕ್ಕೆ ಹಣ ತಲುಪಿದೆ? ಆ 2000 ರೂ.ಗಳಲ್ಲಿ ಕೇಂದ್ರ ಸರ್ಕಾರದ ಹಣ ಸೇರಿದೆ. ಅದನ್ನು ಈ ಸರ್ಕಾರ ಹೇಳಬೇಕಲ್ಲವೇ? ಎಂದು ಹೇಳಿದರು.
ಇವರು ರಾಜ್ಯ ಬರ ಪರಿಹಾರ ನಿಧಿ (SDRF) ಯಿಂದ ಎಷ್ಟು ಹಣ ಕೊಟ್ಟಿದ್ದಾರೆ? ಸರ್ಕಾರದಿಂದ ಒಂದು ರೂಪಾಯಿ ಹಣ ಬಂದಿಲ್ಲ ಎಂದು ಮಂಡ್ಯ ಜನರು ನನಗೆ ಹೇಳಿದರು. ರೈತರು ₹2000 ಬಂದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಇವರು ಸದಾ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಇವರನ್ನು ತೃಪ್ತಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಕೆಲವೊಂದು ಮಾರ್ಗದರ್ಶನದ ಮೇಲೆ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರು.