ಬೆಂಗಳೂರು: ''ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ತರುವ ಮೂಲಕ ಕೇಂದ್ರ ಹಾಗೂ ರಾಜ್ಯದ ನಡುವೆ ಸಂಘರ್ಷ ಉಂಟುಮಾಡಿ ರಾಜ್ಯಕ್ಕೆ ದ್ರೋಹ ಮಾಡಲಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ''ರಾಜ್ಯ ಸರ್ಕಾರ ವಿಧಾನಮಂಡಲದ ಇತಿಹಾಸದಲ್ಲಿ ಹಿಂದೆಂದೂ ಮಾಡದ ಪ್ರಮಾದ ಮಾಡಿದೆ. ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ. ಸುಳ್ಳು ಲೆಕ್ಕಾಚಾರ ಕೊಟ್ಟು ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ 50 ವರ್ಷ ಆಳುವಾಗ ಆದ ಅನ್ಯಾಯವನ್ನು ಸರಿಪಡಿಸಲು ದಶಕಗಳು ಬೇಕಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಕೋ ಆಪರೇಟಿವ್ ಫೆಡರಲಿಸಂ ಎಂಬ ನೀತಿಯಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ 32% ರಿಂದ 42% ಏರಿಸಿದೆ'' ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
''ದೇಶವನ್ನು ಅಧಿಕವಾಗಿ ಆಡಳಿತ ಮಾಡಿರುವುದು ಕಾಂಗ್ರೆಸ್. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ 20% ರಷ್ಟು ಕೂಟ್ಟಿದ್ದು ಶೇ 30 ಹೆಚ್ಚಿಸಲು ಸುದೀರ್ಘ ಹೋರಾಟ ರಾಜ್ಯ ಮಾಡಬೇಕಾಯಿತು. ಶೇ 30% ರಿಂದ ಶೇ 40% ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು'' ಎಂದು ದೂರಿದರು.