ಹಾವೇರಿ:ಈಶ್ವರಪ್ಪ ಅವರಿಗೆ ವರಿಷ್ಠರು ಸಂದೇಶ ಕಳುಹಿಸುತ್ತಾರೆ ಮತ್ತು ನಮ್ಮ ನಾಯಕರು ಅವರನ್ನು ಭೇಟಿಯಾಗುತ್ತಾರೆ. ನಿನ್ನೆ ಈಶ್ವರಪ್ಪ ಅವರ ಅಸಮಾಧಾನ ಸಂಬಂಧ ಯಡಿಯೂರಪ್ಪನವರ ಬಳಿ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಅಸಮಾಧಾನ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾನಗಲ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಸ್ನೇಹ ಅಗಾಧವಾದದ್ದು. ಹಲವಾರು ಬಾರಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಮತ್ತೆ ಒಂದಾಗಿದ್ದಾರೆ. ಅವರ ಗುಟ್ಟು ಇವರಿಗೆ ಗೊತ್ತು, ಇವರ ಗುಟ್ಟು ಅವರಿಗೆ ಗೊತ್ತು. ಹೀಗಾಗಿ ಸೌಹಾರ್ದಯುತವಾಗಿ ಎಲ್ಲವೂ ಬಗೆಹರಿಯುತ್ತದೆ ಎಂದರು.
ನಿರೀಕ್ಷೆ ಮೀರಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡದ ಜನರೂ ಈಗ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಅಲೆ ಇಡೀ ಕರ್ನಾಟಕದಲ್ಲಿ ಇದೆ. ನಿನ್ನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ನಂತರ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅವರು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಮತ್ತು ನಂತರ ಪ್ರಧಾನಿ ಮೋದಿ ಬಂದು ಹೋಗುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರಿಂದ ದೊಡ್ಡ ಪ್ರಮಾಣದ ಬೆಂಬಲ ಮತದಾರರರಿಂದ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.