ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ (ETV Bharat) ಬೆಂಗಳೂರು :ಎಸ್ಐಟಿ ತನಿಖೆ ಏಕಪಕ್ಷೀಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕ ಹೆಚ್. ಡಿ ಕುಮಾರಸ್ವಾಮಿ ಅವರು ಇಂದು ಸಹ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಸ್ಐಟಿ ತನಿಖೆಯು ಕೇವಲ ಪ್ರಜ್ವಲ್ ರೇವಣ್ಣ ಹಾಗೂ ಹೆಚ್. ಡಿ ರೇವಣ್ಣ ವಿರುದ್ಧ ಮಾತ್ರ ಏಕೆ ಕೇಂದ್ರಿಕರಿಸಿದೆ. ಅಲ್ಲದೇ ಪೆನ್ಡ್ರೈವ್ ಹಂಚಿದವರ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಪ್ರಕರಣವೊಂದರಲ್ಲಿ ಇಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಿ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್. ಡಿ ಕುಮಾರಸ್ವಾಮಿ, ಎಸ್ಐಟಿಯು ಕೇವಲ ಪ್ರಜ್ವಲ್ ಹಾಗೂ ರೇವಣ್ಣ ವಿರುದ್ಧ ಏಕೆ ಟಾರ್ಗೆಟ್ ಮಾಡಿದೆ? ಅಶ್ಲೀಲ ವಿಡಿಯೋ ಹರಿಬಿಟ್ಟವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ವಿಡಿಯೋ ಸೋರಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಮಹಿಳಾ ಆಯೋಗ ಪತ್ರ ಬರೆದಿದೆ. ಆದರೆ ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಮಿಸ್ಟರ್ ಪರಮೇಶ್ವರ್ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಕಾರು ಚಾಲಕ ಕಾರ್ತಿಕ್ನನ್ನು ಪ್ರಕರಣದ ಕುರಿತಂತೆ ತರಬೇತಿ ನೀಡಲಾಗುತ್ತಿದೆ. 14 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದವನಿಗೆ ಪ್ರಜ್ವಲ್ ವರ್ತನೆ ಬಗ್ಗೆ ತಿಳಿದಿರಲಿಲ್ಲವೇ ? ಕಾರ್ತಿಕ್, ನವೀನ್, ಶ್ರೇಯಸ್ಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ. ಡಿ ಕೆ ಸಂಸ್ಕೃತಿ ಎಲ್ಲರಿಗೂ ಗೊತ್ತಾಗಿದೆ. ಡಿ ಕೆ ದೇವರಾಜೇಗೌಡ ಜೊತೆ ಯಾಕಪ್ಪ ಮಾತನಾಡಿದೆ ನೀನು? ನಿನಗೇನಿತ್ತು ಕೆಲಸ? ಎಂದು ಡಿಕೆಶಿಯನ್ನ ಪ್ರಶ್ನಿಸಿದರು.
ರೇವಣ್ಣ ವಿಚಾರದಲ್ಲಿ ಮಾತ್ರ ನನ್ನ ಹೋರಾಟ:ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಬಗ್ಗೆ ಅಲ್ಲ. ಸಂಬಂಧಿ ಅಂತಾ ಅಲ್ಲ. ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಅಂತ ಗೊತ್ತಿಲ್ಲ. ನೀವು ತೋರಿಸಿದ್ದಷ್ಟೇ (ಮಾಧ್ಯಮ) ನಮಗೆ ಗೊತ್ತು. ಅದನ್ನು ಹೊರತುಪಡಿಸಿ ಬೇರೆ ಏನೂ ತಿಳಿದಿಲ್ಲ. ಮೇ 15ರಂದು ಬರುತ್ತಾನೆ ಅಂತ ಹೇಳಿದ್ದಾರೆ. ಬರ್ತಾನಾ ನೋಡೋಣ ಎಂದರು.
14 ವರ್ಷ ಕೆಲಸದಲ್ಲಿ ಇದ್ದವನು ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ. ಬಂಡೆ ರಕ್ಷಣೆ ಕೊಡುತ್ತೆ ಅಂತ ಕಾರ್ತಿಕ್ ಅಂದುಕೊಂಡಿದ್ದಾನೆ. ಕಾರ್ತಿಕ್ ಗಿರಿನಗರದಲ್ಲೇ ಇದ್ದಾನಂತೆ. ಆತನಿಗೆ ಟ್ರೈನಿಂಗ್ ಕೊಡ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಇದನ್ನೂ ಓದಿ :ಮೇ 14ರವರೆಗೂ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ - H D REVANNA