ಬೆಳಗಾವಿ:"ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕಾರಗೊಂಡು ಮೂಲೆಗುಂಪಾಗಿರುವವರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ.ಪಾಟೀಲ್‌ಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯಿಂದ ಯತ್ನಾಳರನ್ನು ಉಚ್ಛಾಟಿಸಬೇಕೆಂಬ ರೇಣುಕಾಚಾರ್ಯ ಹೇಳಿಕೆಗೆ ನಗರದಲ್ಲಿಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
"ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ನಾಯಕರ ಸಮ್ಮುಖದಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ಒಟ್ಟಾರೆ ಹೋರಾಟ ವಕ್ಫ್ ಬೋರ್ಡ್ ಮತ್ತು ಸಿದ್ದರಾಮಯ್ಯನವರ ಹಿಂದೂ ವಿರೋಧಿ ಧೋರಣೆಯ ವಿರುದ್ಧ. ವೈಯಕ್ತಿಕ ಮೇಲಾಟ, ಈ ರೀತಿಯ ಅಪಸ್ವರದ ಮಾತುಗಳಿಗೆ ಎಲ್ಲಿ ಜಾಗವಿದೆ?. ಈ ರೀತಿಯ ಮಾತು ಏಕೆ ಬರುತ್ತಿದೆ ಎಂದು ನಂಗೆ ಅರ್ಥವಾಗುತ್ತಿಲ್ಲ" ಎಂದು ತಿರುಗೇಟು ಕೊಟ್ಟರು.
"ನ.25ರಿಂದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ವಕ್ಫ್ ಹಠಾವೋ, ದೇಶ್ ಬಚಾವೋ ಹೋರಾಟ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ, ಕಿತ್ತೂರು ಕರ್ನಾಟಕಕ್ಕೆ ಬಂದಿದ್ದೇವೆ. ಇಂದು ಬೆಳಗಾವಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿಜಯೇಂದ್ರ ನಮ್ಮ ರಾಜ್ಯಾಧ್ಯಕ್ಷರು, ನ.22ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಿದ್ದರು. ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಎಲ್ಲ ಕಡೆಯೂ ಕಾರ್ಯಕ್ರಮ ಯಶಸ್ವಿಯಾಗಿದೆ" ಎಂದರು.
"ಬಸನಗೌಡ ಪಾಟೀಲಯತ್ನಾಳ್ ರಾಜ್ಯ ಬಿಜೆಪಿ ಅತಿದೊಡ್ಡ ನೇತಾರ ಮತ್ತು ಪಕ್ಷದ ಬಹುದೊಡ್ಡ ಆಸ್ತಿ. 1994ರಲ್ಲಿ ಯತ್ನಾಳ್ ಚುನಾಯಿತ ಪ್ರತಿನಿಧಿಯಾದವರು. ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು. ಈ ಭಾಗದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಯತ್ನಾಳ್ ಹೊಂದಿದ್ದಾರೆ. ಅವರ ಜನಪ್ರಿಯತೆ ಬಿಜೆಪಿಗೆ ಲಾಭ ತಂದು ಕೊಡಲಿದೆ ಎಂಬುದು ಹೈಕಮಾಂಡ್ ಗಮನಕ್ಕಿದೆ" ಎಂದು ಹೇಳಿದರು.