ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಯೋತ್ಪಾದಕರಿಗೆ ಭಯ ಇಲ್ಲದಂತಾಗಿದೆ. ಸ್ಲೀಪರ್ ಸೆಲ್ಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಅವರನ್ನು ಪತ್ತೆ ಹಚ್ಚಿ ಹೊರ ಹಾಕುವ ಕೆಲಸ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ಉಗ್ರರು ಬಿಜೆಪಿ ಕಚೇರಿ ಬ್ಲಾಸ್ಟ್ ಸಂಚು ಮಾಡಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ವರದಿ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ ಭಯ ಇಲ್ಲ. ರಾಮೇಶ್ವರ ಕೆಫೆಗೆ ಹೋದ ಕಾಂಗ್ರೆಸ್ ನಾಯಕರು ಬಿಸಿನೆಸ್ ರೈವಲರಿ ಅಂದರು. ಇದು ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ಕೊಟ್ಟಂತೆ ಆಗುತ್ತದೆ. ರಾಮೇಶ್ವರ ಕೆಫೆ ಸ್ಫೋಟದ ದಿನವೇ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡಬೇಕು ಅನ್ನೋ ಸಂಚು ಇತ್ತು. ಆದರೆ, ಅವರ ಟಾರ್ಗೆಟ್ ಹಿಂದೂಗಳು. ಭಯ ಹುಟ್ಟಿಸಿ ಇಲ್ಲಿ ಆಗುವ ಆರ್ಥಿಕ ಚಟುವಟಿಕೆಗೆ ತಡೆ ನೀಡಬೇಕು ಅನ್ನೋದು ಅವರ ಉದ್ದೇಶ ಎಂದು ದೂರಿದರು.
ಬೆಂಗಳೂರಿನಲ್ಲೂ ಭಯ ಹುಟ್ಟಿಸಬೇಕು ಅಂತ ಶಂಕಿತರು ಸಂಚು ರೂಪಿಸಿದ್ದರು. ಇಲ್ಲೂ ಕೂಡ ಬಾಂಗ್ಲಾದೇಶ ರೀತಿಯಲ್ಲೇ ರಾಜಭವನದಲ್ಲಿ ಆಗುತ್ತದೆ ಅಂತ ಒಬ್ಬ ಎಂಎಲ್‌ಸಿ ಹೇಳಿದ್ದರು. ಸ್ಲೀಪರ್ ಸೆಲ್ಸ್‌ಗಳು ಹೆಚ್ಚಾಗ್ತಿದ್ದಾರೆ. ಬಾಂಗ್ಲಾ ದೇಶದಿಂದ ಬಂದು ಕೋಲ್ಕತ್ತಾ ಸೇರಿ ಅವರ ಕಡೆ ಇರುವವರ ಜೊತೆ ಸೇರ್ತಿದ್ದಾರೆ. ಕಳ್ಳತನ, ಇತರೆ ಚಟುವಟಿಕೆಗಳನ್ನು ಮಾಡ್ತಿದ್ದಾರೆ. ಸರ್ಕಾರ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇವರನ್ನ ಪತ್ತೆ ಹಚ್ಚಲು ಟಾಸ್ಕ್ ಫೋರ್ಸ್ ಮಾಡಬೇಕು. ಕೈ ಮೀರಿ ಹೋಗುವ ಹಂತಕ್ಕೆ ಪರಿಸ್ಥಿತಿ ಬರಬಾರದು. ಸರ್ಕಾರ ಇರುತ್ತದೆ, ಹೋಗುತ್ತದೆ. ಆದರೆ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದರು.